ಟ್ರಕ್‍ಗೆ ವಲಸೆ ಕಾರ್ಮಿಕರಿದ್ದ ವಾಹನ ಡಿಕ್ಕಿ- 12 ಮಂದಿ ಸಾವು

– ವಾಹನ ಪೀಸ್ ಪೀಸ್, 21 ಜನರಿಗೆ ಗಂಭೀರ ಗಾಯ

ಕಾಠ್ಮಂಡು: ವಲಸೆ ಕಾರ್ಮಿಕರಿದ್ದ ವಾಹನವು ರಸ್ತೆಬದಿ ನಿಂತಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಸಾವನ್ನಪ್ಪಿದ ಘಟನೆ ನೇಪಾಳದ ಪೂರ್ವ-ಪಶ್ಚಿಮ ಹೆದ್ದಾರಿಯ ಬಂಕೆ ಜಿಲ್ಲೆಯಲ್ಲಿ ನಡೆದಿದೆ.

ಬಂಕೆ ಜಿಲ್ಲೆಯ ತುರಿಯಾ ಅರಣ್ಯ ಪ್ರದೇಶದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 21 ಮಂದಿ ಗಾಯಗೊಂಡಿದ್ದಾರೆ. ನೇಪಾಳಿ ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಿಂದ ನೇಪಾಳದ ಸಲ್ಯಾನ್ ಜಿಲ್ಲೆಗೆ ಹೋಗುವ ಮಾರ್ಗದಲ್ಲಿ ಕರೆದೊಯ್ಯುತ್ತಿದ್ದ ವಾಹನಕ್ಕೆ ಟ್ರಕ್‍ಗೆ ಡಿಕ್ಕಿ ಹೊಡೆದಿದೆ.

“ವಲಸೆ ಕಾರ್ಮಿಕರು ಭಾರತದಿಂದ ನೇಪಾಳಕ್ಕೆ ಹಿಂತಿರುಗುತ್ತಿದ್ದರು. ಭಾನುವಾರ ಮಧ್ಯರಾತ್ರಿ ಅಪಘಾತ ಸಂಭವಿಸಿದೆ. ಎಲ್ಲಾ ಮೃತದೇಹ ಮತ್ತು ಗಾಯಾಳುಗಳನ್ನು ನೇಪಾಳಗುಂಜ್ ನಗರದ ಭೇರಿ ಆಸ್ಪತ್ರೆಗೆ ಸಾಗಿಸಲಾಗಿದೆ” ಎಂದು ಬಂಕೆ ಜಿಲ್ಲಾಧಿಕಾರಿ ರಂಬಹಾದೂರ್ ಕುರುಂಗ್ವಾಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಲಸೆ ಕಾರ್ಮಿಕರಿದ್ದ ವಾಹನವು ವೇಗವಾಗಿ ಚಲಿಸುತ್ತಿತ್ತು. ಈ ವೇಳೆ ಚಾಲಕ ನಿಯಂತ್ರಣ ತಪ್ಪಿದ ವಾಹನ ರಸ್ತೆಬದಿ ನಿಂತಿದ್ದ ಟ್ರಕ್‍ನ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಬಂಕೆ ಜಿಲ್ಲೆಯ ಪೊಲೀಸ್ ಅಧಿಕಾರಿ ಹೃದಯೇಶ್ ಸಪ್ಕೋಟಾ ಮಾಹಿತಿ ನೀಡಿದ್ದಾರೆ.

ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಜಿಲ್ಲಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *