ಟ್ಯೂಷನ್ ತರಗತಿ ಬಗ್ಗೆ ಕೇಳುವ ನೆಪದಲ್ಲಿ ಕರೆದು ಯುವಕನನ್ನ ಥಳಿಸಿ ಕೊಂದ್ರು

– ಯುವತಿಯ ಜೊತೆ ಸಂಬಂಧ ಹೊಂದಿದ್ದಕ್ಕೆ ಸೋದರ ಕೋಪ
– ಸ್ಥಳೀಯ ಮಕ್ಕಳಿಗೆ ಇಂಗ್ಲಿಷ್ ಟ್ಯೂಷನ್ ಹೇಳಿಕೊಡ್ತಿದ್ದ

ನವದೆಹಲಿ: ಬೇರೆ ಸಮುದಾಯಕ್ಕೆ ಸೇರಿದ ಯುವತಿಯ ಜೊತೆ ಸಂಬಂಧ ಹೊಂದಿದ್ದ ಆರೋಪದ ಮೇಲೆ 18 ವರ್ಷದ ಟ್ಯೂಷನ್ ಶಿಕ್ಷಕನನ್ನು ಗುಂಪೊಂದು ಥಳಿಸಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಈ ಘಟನೆ ವಾಯುವ್ಯ ದೆಹಲಿಯ ಆದರ್ಶ್ ನಗರ ಪ್ರದೇಶದಲ್ಲಿ ನಡೆದಿದೆ. ಮೃತನನ್ನು ರಾಹುಲ್ ರಜಪೂತ್ ಎಂದು ಗುರುತಿಸಲಾಗಿದೆ. ಈತ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದು, ಸ್ಥಳೀಯ ಮಕ್ಕಳಿಗೆ ಇಂಗ್ಲಿಷ್ ಟ್ಯೂಷನ್ ನಡೆಸುತ್ತಿದ್ದನು. ಈತ ಬೇರೆ ಸಮುದಾಯಕ್ಕೆ ಸೇರಿದ ಯುವತಿಯ ಜೊತೆ ಸ್ನೇಹ ಬೆಳೆಸಿದ್ದನು. ಹುಡುಗಿಯ ಕುಟುಂಬವು ಇಬ್ಬರ ನಡುವಿನ ಸಂಬಂಧಕ್ಕೆ ವಿರುದ್ಧ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.

ರಾಹುಲ್ ರಜಪೂತ್‍ನಿಗೆ ಇಂಗ್ಲಿಷ್ ಟ್ಯೂಷನ್ ತರಗತಿಗಳ ಬಗ್ಗೆ ವಿಚಾರಿಸುವ ನೆಪದಲ್ಲಿ ಫೋನ್ ಮಾಡಿದ್ದಾರೆ. ಈ ವೇಳೆ ರಜಪೂತ್ ಮನೆಯ ಸಮೀಪದಲ್ಲೇ ಭೇಟಿಯಾಗಲು ತಿಳಿಸಿದ್ದಾರೆ. ಅಲ್ಲಿಗೆ ಹೋದ ರಜಪೂತ್ ಮೇಲೆ 7-8 ಹುಡುಗರೊಂದಿಗೆ ಯುವತಿಯ ಸಹೋದರ ಕೋಲು ಮತ್ತು ದೊಣ್ಣೆಯಿಂದ ಹೊಡೆದಿದ್ದಾನೆ. ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಜಪೂತ್‍ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಜಪೂತ್ ಸಾವನ್ನಪ್ಪಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.

ಸುಮಾರು ಒಂದು ತಿಂಗಳ ಹಿಂದೆ ಹುಡುಗಿ ರಾಹುಲ್‍ಗೆ ಫೋನ್ ಮಾಡಿದ್ದಳು. ಆದರೆ ಆಕೆಯ ತಾಯಿ ಮತ್ತೆ ಕರೆ ಮಾಡದಂತೆ ಮಗಳಿಗೆ ಎಚ್ಚರಿಸಿದ್ದರು. ಇಬ್ಬರು ಈ ಹಿಂದೆ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಸ್ನೇಹಿತರಾಗಿದ್ದರು. ಆದರೆ ಇಬ್ಬರು ಒಟ್ಟಿಗೆ ಮಾತನಾಡುವುದು ನೋಡಿದ ಆಕೆಯ ಸಹೋದರ ಕೋಪಕೊಂಡು ಈ ರೀತಿ ಮಾಡಿದ್ದಾನೆ. ಟ್ಯೂಷನ್ ತರಗತಿಗಳ ಬಗ್ಗೆ ವಿಚಾರಿಸುವ ನೆಪದಲ್ಲಿ ಕರೆದು ಕೊಲೆ ಮಾಡಿದ್ದಾರೆ. ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ರಾಹುಲ್ ತಂದೆ ಸಂಜಯ್ ರಜಪೂತ್ ಕಣ್ಣೀರು ಹಾಕಿದರು.

ಯುವಕರ ಸಾವಿನ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ನಮಗೆ ಮಾಹಿತಿ ನೀಡಿದ್ದಾರೆ. ಹುಡುಗನ ಚಿಕ್ಕಪ್ಪ ನೀಡಿದ ದೂರಿನ ನಂತರ ನಾವು ಪ್ರಕರಣ ದಾಖಲಿಸಿದ್ದೇವೆ. ಈಗಾಗಲೇ ಯುವತಿಯ ಸಹೋದರ ಮೊಹಮ್ಮದ್ ರಾಜ್, ಆಕೆಯ ಸಂಬಂಧಿ ಮನ್ವರ್ ಹುಸೇನ್ ಮತ್ತು ಇತರ ಮೂವರು ಅಪ್ರಾಪ್ತರು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *