ಟಿಬೆಟ್ ಕ್ಯಾಂಪ್ ನಲ್ಲಿ ಲಾಕ್ ಡೌನ್ – ಹೊರಗಿನವರಿಗೆ ಪ್ರವೇಶವಿಲ್ಲ

ಮಡಿಕೇರಿ: ಕೊರೊನಾ ಮಹಾಮಾರಿಯ ಅಬ್ಬರ ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ದೇಶದಲ್ಲೇ ಲಾಕ್‍ಡೌನ್ ತೆರವಾಗಿದೆ. ಆದರೂ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಟಿಬೆಟ್ ಕ್ಯಾಂಪಿನಲ್ಲಿ ಮಾತ್ರ ಇಂದಿಗೂ ಲಾಕ್‍ಡೌನ್ ತೆರವಾಗಿಲ್ಲ.

ಬೈಲುಕೊಪ್ಪದಲ್ಲಿರುವ ಟಿಬೆಟ್ ಕ್ಯಾಂಪ್ ಇಂದಿಗೂ ಸಂಪೂರ್ಣ ಬಂದ್ ಆಗಿದೆ. ಆಧ್ಯಾತ್ಮಿಕ ಕೇಂದ್ರಗಳಾಗಿರುವ ನಾಮ್ಡೋಲಿಂಗ್ ಮೊನಾಸ್ಟ್ರಿ ಸೇರಿದಂತೆ ಕ್ಯಾಂಪ್ ಗಳನ್ನು ಬಂದ್ ಮಾಡಲಾಗಿದೆ. ಹೊರಗಿನವರು ಯಾರು ಈ ಕ್ಯಾಂಪ್ ಅಥವಾ ಮೊನಾಸ್ಟ್ರಿಗಳಿಗೆ ಭೇಟಿ ನೀಡುವಂತಿಲ್ಲ.

ಈ ಮೊನಾಸ್ಟ್ರಿಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಲಾಮಾ ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ. ಹೀಗಾಗಿಯೇ ಮೊನಾಸ್ಟ್ರೀಗಳಿಗೆ ಹೊರಗಿನ ಯಾರು ಭೇಟಿ ನೀಡದಂತೆ ಲಾಕ್ ಡೌನ್ ಮುಂದುವರಿಸಲಾಗಿದೆ. ಒಂದು ವೇಳೆ ಹೊರಗಿನವರಿಗೆ ಬಂದರೆ, ಈ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹರಡಬಹುದೆಂಬ ದೃಷ್ಟಿಯಿಂದ ನಾಮ್ಡೋಲಿಂಗ್ ಮೊನಾಸ್ಟ್ರಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಮೊನಾಸ್ಟ್ರಿಗಳಲ್ಲಿ ಬೃಹತ್ ಬುದ್ಧ ಪ್ರತಿಮೆಗಳು ಸೇರಿದಂತೆ ವಿಶೇಷ ದೇವಾಲಯಗಳಿದ್ದು, ನಿತ್ಯ ಸಾವಿರಾರು ಪ್ರವಾಸಿಗರು ವೀಕ್ಷಣೆಗೆ ಆಗಮಿಸುತ್ತಿದ್ದರು. ಆದರೆ ಈಗ ನಾಮ್ಡೋಲಿಂಗ್ ಮೊನಾಸ್ಟ್ರಿಗಳು ಬಂದ್ ಆಗಿರುವುದರಿಂದ ಮಾಹಿತಿ ಇಲ್ಲದೆ ಹೊರ ಜಿಲ್ಲೆ, ರಾಜ್ಯಗಳಿಂದ ಬರುವ ಪ್ರವಾಸಿಗರು ನಿರಾಶರಾಗಿ ವಾಪಾಸ್ಸಾಗುತ್ತಿದ್ದಾರೆ. ಪ್ರವಾಸಿಗರ ಕೊರತೆಯಿಂದಾಗಿ ಕ್ಯಾಂಪಿನ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿವೆ. ಜೊತೆಗೆ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ಥಬ್ಧವಾಗಿದ್ದು ವ್ಯಾಪಾರಸ್ಥರು ಕೂಡ ಆತಂಕದಲ್ಲಿದ್ದಾರೆ.

ಸದ್ಯ ಏಪ್ರಿಲ್ ತಿಂಗಳಲ್ಲಿ ಟಿಬೆಟಿಯನ್ನರು ಹೊಸ ವರ್ಷಾಚರಣೆ ಮಾಡುವುದರಿಂದ ಆ ಸಂದರ್ಭಕ್ಕೆ ಲಾಕ್ ಡೌನ್ ತೆರವು ಮಾಡಲಾಗುತ್ತದೆ ಎಂಬ ಮಾಹಿತಿ ಇದೆ. ಸದ್ಯ ದಿನಬಳಕೆ ಅಗತ್ಯ ವಸ್ತುಗಳ ಅಂಗಡಿಗಳು ತೆರೆಯಲಾಗಿದೆ. ವ್ಯಾಪಾರ ಆದರೂ ಆಗಲಿ ಎಂದು ಕೆಲವು ಸ್ಪೈಸಿಸ್ ಅಂಗಡಿಗಳು ತೆರೆದಿವೆಯಾದರೂ ವ್ಯಾಪಾರ ಮಾತ್ರ ಇಲ್ಲ. ಜೊತೆಗೆ ಅವರದೇ ಆಸ್ಪತ್ರೆಗಳು ತೆರೆದಿದ್ದು, ಕಾರ್ಯನಿರ್ವಹಿಸುತ್ತಿವೆ.

Comments

Leave a Reply

Your email address will not be published. Required fields are marked *