ಟಿಕ್‍ಟಾಕ್ ಬ್ಯಾನ್ ಮಾಡಿದ್ರೆ ಜನರ ಮನಸ್ಥಿತಿ ಬದಲಾಗಲ್ಲ: ಸಂಯುಕ್ತಾ ಹೆಗ್ಡೆ

ಬೆಂಗಳೂರು: ಟಿಕ್‍ಟಾಕ್ ಬ್ಯಾನ್ ಮಾಡಿದರೆ ಜನರ ಮನಸ್ಥಿತಿ ಬದಲಾಗುವುದಿಲ್ಲ ಎಂದು ನಟಿ ಸಂಯುಕ್ತಾ ಹೆಗ್ಡೆ ಟ್ವೀಟ್ ಮಾಡಿದ್ದಾರೆ.

ಸ್ವದೇಶಿ ವಸ್ತುಗಳನ್ನು ಬಳಸಿ ಚೀನಾದ ವಸ್ತುಗಳನ್ನು ಬಹಿಷ್ಕಾರ ಮಾಡಿ ಎಂಬ ಕೂಗು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕೇಳಿಬರುತ್ತಿದೆ. ಹೀಗಾಗಿ ಟಿಕ್‍ಟಾಕ್ ಆ್ಯಪ್ ಚೀನಾದ ದೇಶದ್ದು ಎಂಬ ಕಾರಣಕ್ಕೆ ಅದನ್ನು ಭಾರತದಲ್ಲಿ ಬ್ಯಾನ್ ಮಾಡಿ ಎಂದು ಕೆಲವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಈಗ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

ಈಗ ಟಿಕ್‍ಟಾಕ್ ಬ್ಯಾನ್ ಮಾಡಬೇಡಿ ಎಂದು ಟ್ವೀಟ್ ಮಾಡಿರುವ ಸಂಯುಕ್ತಾ ಹೆಗ್ಡೆ, ಒಂದು ಪ್ಲಾಟ್‍ಫಾರ್ಮ್ ಅನ್ನು ನಿಷೇಧ ಮಾಡುವುದರಿಂದ ಅದರಲ್ಲಿ ಇರುವ ಜನರ ಮನಸ್ಥಿತಿ ಬದಲಾಗುವುದಿಲ್ಲ. ಈ ಪ್ಲಾಟ್‍ಫಾರ್ಮ್ ಅನ್ನು ನಿಷೇಧ ಮಾಡಿದರೆ ಜನ ಅವರ ಭಯಾನಕ ವಿಷಯಗಳನ್ನು ಆಪ್ಲೋಡ್ ಮಾಡಲು ಬೇರೆ ಇನ್ನೊಂದು ಆ್ಯಪ್ ಅನ್ನು ಹುಡುಕಿಕೊಳ್ಳುತ್ತಾರೆ. ಆದರೆ ಟಿಕ್‍ಟಾಕ್‍ಗೆ ಏನಾದರೂ ವೈಯಕ್ತಿಕವಾಗಿ ನನಗೆ ಏನೂ ಆಗಬೇಕಿಲ್ಲ ಎಂದು ಬರೆದುಕೊಂಡಿದ್ದಾರೆ.

ಈಗಾಗಲೇ ಟಿಕ್‍ಟಾಕ್ ವಿಚಾರದಲ್ಲಿ ಭಾರೀ ಚೆರ್ಚೆ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಯೂಟ್ಯೂಬ್ ವರ್ಸಸ್ ಟಿಕ್‍ಟಾಕ್ ಎಂಬ ಸ್ಪರ್ಧೆ ಉಂಟಾಗಿದೆ. ಈ ನಡುವೆ ಕೆಲಸ ಜನರು ಟಿಕ್‍ಟಾಕ್‍ಗೆ ರೀಪೋರ್ಟ್ ಮಾಡಿ 4.6 ಇಂದ ಅದರ ರೇಟಿಂಗ್ ಅನ್ನು 1.6ಕ್ಕೆ ಇಳಿಸಿದ್ದಾರೆ. ಕರ್ನಾಟಕದಲ್ಲೂ ಟಿಕ್‍ಟಾಕ್ ಬ್ಯಾನ್ ಮಾಡಿ ಎಂಬ ಸದ್ದು ಜೋರಾಗಿ ಕೇಳಿ ಬರುತ್ತಿದೆ. ಕೆಲ ಸೆಲೆಬ್ರಿಟಿಗಳೇ ಇದನ್ನು ಬ್ಯಾನ್ ಮಾಡುವಂತೆ ಟ್ವೀಟ್ ಮಾಡುತ್ತಿದ್ದಾರೆ.

ಟಿಕ್‍ಟಾಕ್‍ನಲ್ಲಿ ಕೆಲ ಸೆಲೆಬ್ರಿಟಿಗಳು ವಿಡಿಯೋ ಮಾಡುತ್ತಿದ್ದರೆ, ಈ ಕಡೆ ಕೆಲ ಸೆಲೆಬ್ರಿಟಿಗಳು ಅದನ್ನು ಬ್ಯಾನ್ ಮಾಡುವಂತೆ ಟ್ವೀಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಸ್ಯಾಂಡಲ್‍ವುಡ್‍ನ ಸ್ಟಾರ್ ನಿರ್ದೇಶಕರಾದ ಸಂತೋಷ್ ಅನಂದ್‍ರಾಮ್, ಪವನ್ ಒಡೆಯರ್ ಮತ್ತು ಎಪಿ ಅರ್ಜೂನ್ ಟಿಕ್‍ಟಾಕ್ ಅನ್ನು ಬ್ಯಾನ್ ಮಾಡಿ ಎಂದು ಬರೆದು ಟ್ವೀಟ್ ಮಾಡಿದ್ದರು. ಇದಕ್ಕೆ ಕೆಲ ಬಾಲಿವುಡ್ ನಟರು ಕೂಡ ಕೈಜೋಡಿಸಿದ್ದು, ಟಿಕ್‍ಟಾಕ್ ಬ್ಯಾನ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.

ಟಿಕ್‍ಟಾಕ್ ಅನ್ನು ಭಾರತದಲ್ಲಿ ಅತೀ ಹೆಚ್ಚು ಜನ ಬಳಸುತ್ತಿದ್ದಾರೆ. ಇದರಲ್ಲಿ ಜನಪ್ರಿಯತೆ ಪಡೆಯಬೇಕು ಎಂದು ಜನರು ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಈ ಟಿಕ್‍ಟಾಕ್‍ನಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ ಎಂದು ರಾಷ್ಟೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಹೇಳಿದ್ದಾರೆ. ಜೊತೆಗೆ ಟಿಕ್‍ಟಾಕ್ ಚೀನಾ ಆ್ಯಪ್ ಆಗಿದ್ದು, ಇದನ್ನು ನಿಷೇಧ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *