ಟಾಲಿವುಡ್‍ನಲ್ಲಿ ನಾಗಭೈರವಿ ಅವತಾರ ತಾಳಿದ ಗಟ್ಟಿಮೇಳ ಖ್ಯಾತಿಯ ಅಶ್ವಿನಿ

ಬೆಂಗಳೂರು: ಗಟ್ಟಿಮೇಳ ಧಾರಾವಾಹಿ ಮೂಲಕ ಚಿರಪರಿಚಿತರಾಗಿರುವ ನಟಿ ಅಶ್ವಿನಿ ಇದೀಗ ಅವರ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದು, ನಾಗ ಭೈರವಿಯ ಅವತಾರ ತಾಳಿದ್ದಾರೆ.

ನಟಿ ಅಶ್ವಿನಿ ಈ ಕುರಿತ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಲೇ ಮತ್ತೊಂದು ಧಾರಾವಾಹಿಯನ್ನು ಅಶ್ವಿನಿ ಒಪ್ಪಿಕೊಂಡರಾ ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟರ್ ಗಳಲ್ಲಿ ಅಶ್ವಿನಿ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಫೋಟೋಗಳು ಸಖತ್ ವೈರಲ್ ಆಗಿವೆ.

ಅಶ್ವಿನಿ ಪ್ರಸ್ತುತ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರ ನಿರ್ವಹಿಸುತ್ತಿದ್ದು, ಕನ್ನಡಿಗರ ಮನೆ ಮಾತಾಗಿದ್ದಾರೆ. ಇದಕ್ಕೂ ಮೊದಲು ರಾಧಾ ರಮಣ ಧಾರಾವಾಹಿಯಲ್ಲಿ ತೊದಲು ಮಾತನಾಡುವ ಮುಗ್ದ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದರು. ಅದಾದ ಬಳಿಕ ಇದೀಗ ಗಟ್ಟಿಮೇಳ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಇದೀಗ ಮತ್ತೊಂದು ಪವರ್‍ಫುಲ್ ಪಾತ್ರದಲ್ಲಿ ಅಶ್ವಿನಿ ಕಾಣಿಸಿಕೊಳ್ಳುತ್ತಿದ್ದು, ನಾಗಭೈರವಿಯ ಅವತಾರ ತಾಳಿದ್ದಾರೆ. ಈ ಮೂಲಕ ಟಾಲಿವುಡ್‍ಗೆ ಕಾಲಿಟ್ಟಿದ್ದಾರೆ.

ತೆಲುಗಿನ ‘ನಾಗಭೈರವಿ’ ಧಾರಾವಾಹಿಯಲ್ಲಿ ಅಶ್ವಿನಿ ಎರಡು ಶೇಡ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಗದೇವತೆ ಹಾಗೂ ಬುಡಕಟ್ಟು ಜನಾಂಗದ ಹುಡುಗಿಯಾಗಿ ಅಶ್ವಿನಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ವಿಭಿನ್ನ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಲಾಕ್‍ಡೌನ್‍ಗೂ ಮುನ್ನವೇ ಅವರಿಗೆ ಈ ಆಫರ್ ಬಂದಿತ್ತು. ಹೀಗಾಗಿಯೇ ಅವರು 7 ಕೆ.ಜಿ. ತೂಕವನ್ನು ಸಹ ಇಳಿಸಿಕೊಂಡು ಸಣ್ಣಗಾಗಿದ್ದಾರೆ.

‘ನಾಗಭೈರವಿ’ಯಲ್ಲಿ ವಿಭಿನ್ನ ಎರಡು ಪಾತ್ರಗಳನ್ನು ನಿಭಾಯಿಸುತ್ತಿರುವುದರಿಂದ ಈ ಪ್ರಾಜೆಕ್ಟ್ ಮೂಲಕ ಬಣ್ಣದ ಬದುಕಿಗೆ ದೊಡ್ಡ ತಿರುವು ಸಿಗಲಿದೆ ಎಂಬುದು ಅಶ್ವಿನಿ ಅವರ ನಿರೀಕ್ಷೆ. ಈಗಾಗಲೇ ಸೀರಿಯಲ್ ಪ್ರೋಮೋಗಳು ರಿಲೀಸ್ ಆಗಿದ್ದು, ಅಶ್ವಿನಿ ತಮ್ಮ ವಿಶಿಷ್ಟ ಪಾತ್ರದಿಂದ ಗಮನಸೆಳೆದಿದ್ದಾರೆ. ಅಶ್ವಿನಿಯ ಪರ್ಫಾಮೆನ್ಸ್ ನೋಡಿ ಧಾರಾವಾಹಿ ತಂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದೆಯಂತೆ.

ಇನ್ನೂ ವಿಶೇಷವೆಂದರೆ ಈ ಧಾರಾವಾಹಿಯಲ್ಲಿ ಸಾಹಸ ದೃಶ್ಯಗಳಿದ್ದು, ನಟಿ ಅನುಷ್ಕಾ ಶೆಟ್ಟಿಗೆ ಸಾಹಸ ಹೇಳಿಕೊಟ್ಟ ಮಾಸ್ಟರ್, ಅಶ್ವಿನಿಗೆ ಫೈಟ್ ಹೇಳಿಕೊಟ್ಟಿದ್ದಾರೆ. ಈ ಪಾತ್ರ ತುಂಬಾ ಪರ್ಫಾಮೆನ್ಸ್ ಬೇಡುವುದರಿಂದ ಅಶ್ವಿನಿ ‘ನಾಗಭೈರವಿ’ ಸೀರಿಯಲ್ ಒಪ್ಪಿಕೊಂಡಿದ್ದಾರೆ. ‘ಗಟ್ಟಿಮೇಳ’ ಹಾಗೂ ‘ನಾಗಭೈರವಿ’ ಎರಡು ಧಾರಾವಾಹಿಗಳನ್ನು ಮಾಡುತ್ತಿರುವುದರಿಂದ ಅಶ್ವಿನಿ ಇನ್ನು ಫುಲ್ ಬ್ಯುಸಿಯಾಗಲಿದ್ದಾರೆ. ತುಂಬಾ ಶೇಡ್ ಹಾಗೂ ಫೈಟಿಂಗ್ ಸೀನ್‍ಗಳಿರುವುದರಿಂದ ಅಶ್ವಿನಿ ಈ ಧಾರಾವಾಹಿಗೆ ಹೆಚ್ಚು ಸಮಯ ನೀಡುತ್ತಿದ್ದಾರಂತೆ. ಅಲ್ಲದೆ ಇಂತಹ ವಿಭಿನ್ನ ಪಾತ್ರದ ಅವಕಾಶ ಸಿಕ್ಕಿದ್ದಕ್ಕೆ ಅಶ್ವಿನಿ ಫುಲ್ ಖುಷಿಯಾಗಿದ್ದಾರಂತೆ.

Comments

Leave a Reply

Your email address will not be published. Required fields are marked *