ಜ್ಞಾನ ದೀವಿಗೆ- ಮೈಸೂರಿನ 1 ಸಾವಿರ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

ಮೈಸೂರು: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಭವಿಷ್ಯ ಬೆಳಕಾಗಿಸುವ ಜ್ಞಾನ ದೀವಿಗೆ ಕಾರ್ಯಕ್ರಮದ ಭಾಗವಾಗಿ ಇಂದು ಜಿಲ್ಲೆಯ ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನ ಶಾಲೆಗಳ ಒಂದು ಸಾವಿರ ಮಕ್ಕಳಿಗೆ 500 ಟ್ಯಾಬ್ ವಿತರಿಸಲಾಯಿತು.

ಬಡ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಿಸುವ ಜ್ಞಾನ ದೀವಿಗೆ ಮಹಾ ಅಭಿಯಾನವನ್ನು ನಿಮ್ಮ ಪಬ್ಲಿಕ್ ಟಿವಿ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದಲ್ಲಿ ಆರಂಭಿಸಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಗುತ್ತಿದೆ. ಮೈಸೂರಿನ ಬ್ಯಾಂಕ್ ನೋಟ್ ಪೇಪರ್ ಮಿಲ್ ಮೈಸೂರು, ಕೊಡಗು ಜಿಲ್ಲೆಯ ಮಕ್ಕಳಿಗೆ ಟ್ಯಾಬ್ ವಿತರಿಸಲು 35 ಲಕ್ಷ ರೂಪಾಯಿ ದೇಣಿಗೆ ನೀಡಿತ್ತು.

ಇಂದು ಹುಣಸೂರು ಹಾಗೂ ಪಿರಿಯಾಪಟ್ಟಣದ ಸರ್ಕಾರಿ ಶಾಲೆಯ ಒಟ್ಟು 1 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 500 ಟ್ಯಾಬ್ ನೀಡಲಾಯಿತು. ಪಿರಿಯಾಪಟ್ಟಣದ 8 ಸರ್ಕಾರಿ ಶಾಲೆಯ 500 ಹಾಗೂ ಹುಣಸೂರಿನ 10 ಸರ್ಕಾರಿ ಶಾಲೆಯ 500 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು.

ಎರಡೂ ಕಡೆ ನಡೆದ ಪ್ರತ್ಯೇಕ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಚ್.ಪಿ.ಮಂಜುನಾಥ್, ಬ್ಯಾಂಕ್ ನೋಟ್ ಪೇಪರ್ ಮಿಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಜೆ.ವಿಶ್ವನಾಥ್, ವ್ಯವಸ್ಥಾಪಕರಾದ ಧರಣೀಕುಮಾರ್, ಅನಂತ್ ಹೆಗ್ಡೆ, ಹಿರಿಯ ರೋಟೆರಿಯನ್ ಎಚ್.ಆರ್.ಕೇಶವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದೇ ಸಂಸ್ಥೆಯ ಇಚ್ಛೆಯಂತೆ ಏಪ್ರಿಲ್ ಎರಡನೇ ವಾರದಲ್ಲಿ ಇನ್ನೂ ಒಂದು ಸಾವಿರ ವಿದ್ಯಾರ್ಥಿಗಳಿಗೆ 500 ಟ್ಯಾಬ್ ಗಳನ್ನು ಕೊಡಗಿನಲ್ಲಿ ವಿತರಿಸಲಾಗುವುದು. ಪಬ್ಲಿಕ್ ಟಿವಿ ಮತ್ತು ರೋಟರಿ ಸಂಸ್ಥೆಯ ಈ ಮಹಾ ಯಜ್ಞಕ್ಕೆ ದೊಡ್ಡ ಮಟ್ಟದಲ್ಲಿ ದೇಣಿಗೆ ನೀಡಿ ಸಹಕರಿಸಿದ ಬ್ಯಾಂಕ್ ನೋಟ್ ಪೇಪರ್ ಮಿಲ್ ಗೆ ಹಾಗೂ ಈ ಯಜ್ಞ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲು ಕಾರಣರಾದ ಎಲ್ಲಾ ಮಹಾ ದಾನಿಗಳಿಗೂ ನಾವು ಅಭಾರಿ.

Comments

Leave a Reply

Your email address will not be published. Required fields are marked *