ಜ್ಞಾನ ದೀವಿಗೆ- ಕೊಡಗಿನ 471 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

ಮಡಿಕೇರಿ: ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಜ್ಞಾನ ದೀವಿಗೆ ಕಾರ್ಯಕ್ರಮದ ಮೂಲಕ ಕೊಡಗು ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ 471 ಉಚಿತ ಟ್ಯಾಬ್ ವಿತರಿಸಲಾಯಿತು.

ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ಬ್ಯಾಂಕ್ ನೋಟ್ ಪೇಪರ್ ಮೀಲ್ ವ್ಯವಸ್ಥಾಪಕ ಅನಂತ್ ಹೆಗ್ಡೆ, ಬ್ಯಾಂಕ್ ನೋಟ್ ಪೇಪರ್ ಮಿಲ್ ಕಂಪನಿ ಸೆಕ್ರೆಟರಿ ಲಕ್ಷ್ಮೀಶ್ ಬಾಬು, ರೋಟೆರಿಯನ್ ಗಣಪತಿ ಹಾಗೂ ಸುದೀಪ್ ಅವರು ಟ್ಯಾಬ್ ಗಳನ್ನು ವಿತರಿಸಿದರು. ಕೊಡಗು ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಾಗಿರುವುದರಿಂದ ಕೇವಲ 10 ಮಕ್ಕಳಿಗೆ ಸಾಕೇಂತಿಕವಾಗಿ ಟ್ಯಾಬ್ ವಿತರಿಸಲಾಯಿತು.

ಜಿಲ್ಲೆಯ ಗ್ರಾಮೀಣ ಭಾಗದ ಮಕ್ಕಳು ಟ್ಯಾಬ್ ಕಂಡು ಖುಷಿ ಪಟ್ಟರು. ದಿನೇ ದಿನೇ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದರಿಂದ ಶಾಲೆಗಳಿಗೆ ಹೋಗಲು ಭಯ ಪಡುವ ಪರಿಸ್ಥಿತಿ ಇದೆ. ಆನ್‍ಲೈನ್ ತರಗತಿಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ವರ್ಷದ ಪರೀಕ್ಷೆ ಹೇಗೆ ಬರೆಯುವುದು ಎಂಬ ಚಿಂತೆ ಕಾಡುತ್ತಿತ್ತು. ಈಗ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಆರ್ ಬಿಐ ಅವರ ಸಹಾಯದಿಂದ ಟ್ಯಾಬ್ ನೀಡಿರುವುದು ಸಹಾಯವಾಗಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತಾನಾಡಿ, ಮಕ್ಕಳ ಭವಿಷ್ಯದ ಚಿಂತನೆ ಮಾಡಿದ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಅವರ ಕೆಲಸ ನಿಜಕ್ಕೂ ಶ್ಲಾಘನೀಯ. ಮಾಧ್ಯಮ ಮನಸು ಮಾಡಿದರೆ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಬಹುದು. ಈ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಅರ್.ರಂಗನಾಥ್ ಅವರು ಮಾಡುತ್ತಿರುವ ಸೇವೆ ಇತಿಹಾಸದ ಪುಟದಲ್ಲಿ ಸೇರಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *