ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನಿನ್ನೆಯಷ್ಟೇ ಸುಪ್ರೀಂ ಕೋರ್ಟ್‍ನಲ್ಲಿ ಜಾಮೀನು ಸಿಕ್ಕಿದೆ. ಆದರೆ ಜಾಮೀನು ಸಿಕ್ಕರೂ ಅವರಿಗೆ ಜೈಲಿನಿಂದ ಬಿಡುಗಡೆ ಭಾಗ್ಯವಿಲ್ಲ. ಇನ್ನೊಂದು ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕ ಅವರು ಜೈಲಿನಿಂದ ಬಿಡುಗಡೆ ಹೊಂದಬಹುದೆಂದು ವಿನಯ್ ಪರ ವಕೀಲರಾದ ಆನಂದ ಕೊಳ್ಳಿ ತಿಳಿಸಿದ್ದಾರೆ.

ಈ ವಿಚಾರವಾಗಿ ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆನಂದ ಕೊಳ್ಳಿ, ಇನ್ನೊಂದು ಪ್ರಕರಣದಲ್ಲಿ ಜಾಮೀನು ಆಗಬೇಕಿದೆ. ಈಗಾಗಲೇ ಆ ಪ್ರಕರಣದ ಜಾಮೀನು ಅರ್ಜಿ ಸಲ್ಲಿಸಲಿದ್ದೇವೆ. ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಾಗಿಟ್ಟುಕೊಂಡು ಈ ಅರ್ಜಿ ಸಲ್ಲಿಸುತ್ತೇವೆ. ವಿನಯ್ ಕುಲಕರ್ಣಿ ಬೆಂಗಳೂರಿನಲ್ಲೇ ಇರುವಂತೆ ಕೋರ್ಟ್ ಆದೇಶ ಮಾಡಿದೆ. ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ, ಧಾರವಾಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಇದೆ ಎಂದರು.

ವಿನಯ್ ಕುಲಕರ್ಣಿ ಧಾರವಾಡಕ್ಕೆ ಬರಬೇಕೆಂದರೆ ಸುಪ್ರೀಂ ಕೋರ್ಟ್‍ನ ಅನುಮತಿ ಪಡೆಯಬೇಕು. ಅವಶ್ಯಕ ಕಾರಣ ಒದಗಿಸಿ ಅನುಮತಿ ಪಡೆಯಬಹುದಾಗಿದೆ. ಸುಪ್ರೀಂ ಕೋರ್ಟ್‍ನಲ್ಲಿ ಜಾಮೀನಿಗೆ ಸಿಬಿಐ ವಿರೋಧ ವ್ಯಕ್ತಪಡಿಸಿತ್ತು, ಕಾನೂನು ಪ್ರಕಾರ ಸಿಬಿಐ ನಡೆ ತಪ್ಪು ಎಂದು ನಾವು ವಾದಿಸಿದ್ದೇವು. ನಮ್ಮ ವಾದವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತು, ಹೈಕೋರ್ಟ್‍ನಲ್ಲಿನ ವಿಚಾರಣೆ ಎರಡು ತಿಂಗಳಲ್ಲಿ ಮುಗಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂನಿಂದ ಜಾಮೀನು

ಈ ಪ್ರಕರಣ ಸಿಬಿಐಗೆ ವಹಿಸಿದ್ದು ಕಾನೂನು ಪ್ರಕಾರ ಸರಿಯೇ ಎನ್ನುವ ವಿಚಾರವಾಗಿ ಅವರು ಮಾತನಾಡಿ, ಅದು ಬೆಂಗಳೂರು ಹೈಕೋರ್ಟ್‍ನ ವಿಚಾರಣೆಯಲ್ಲಿ ನಿರ್ಧಾರ ಆಗಲಿದೆ, ರಾಜ್ಯ ಸರ್ಕಾರ ಮೂರು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ, ಅದರಲ್ಲಿ ಒಂದು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು, ಆಗ ಯೋಗೇಶ್ ಗೌಡ ಅವರ ಅಣ್ಣ ಹೈಕೋರ್ಟ್ ಮೊರೆ ಹೋಗಿದ್ದರು, ಹೈಕೋರ್ಟ್ ಅವರ ಅರ್ಜಿಯನ್ನೂ ತಿರಸ್ಕರಿಸಿತ್ತು, ಆದರೂ ಸರ್ಕಾರ ಮತ್ತೆ ಸಿಬಿಐ ನೀಡಿತ್ತು. ಇದನ್ನೇ ಚಾಲೆಂಜ್ ಮಾಡಿ ಜಾಮೀನು ಪಡೆಯಲಾಗಿದೆ ಎಂದು ತಿಳಿಸಿದರು.

Leave a Reply