ಜೈಲಿನಲ್ಲಿ ಗಲಾಟೆ- 8 ಕೈದಿಗಳು ಸಾವು, 37 ಜನರಿಗೆ ಗಾಯ

ಕೊಲಂಬೊ: ಶ್ರೀಲಂಕಾ ಜೈಲಿನಲ್ಲಿ ನಡೆದ ಗಲಾಟೆಯ ಪರಿಣಾಮ 8 ಕೈದಿಗಳು ಸಾವನ್ನಪ್ಪಿದ್ದು, 37 ಜನರಿಗೆ ಗಾಯವಾಗಿರುವ ಘಟನೆ ಶ್ರೀಲಂಕಾದ ಕೊಲಂಬೋದಲ್ಲಿ ನಡೆದಿದೆ.

ಕೊಲಂಬೋದ ಹೊರವಲಯದಲ್ಲಿರುವ ಜೈಲಿನಲ್ಲಿ ಭಾನುವಾರ ರಾತ್ರಿ ಗಲಾಟೆ ಆಗಿದೆ. ಈ ವೇಳೆ ಕೆಲವು ಕೈದಿಗಳು ಬಲವಂತವಾಗಿ ಬಾಗಿಲು ಮುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಗಲಭೆಯ ನಡುವೆ ಎಂಟು ಮಂದಿ ಕೈದಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಹಾಗೆಯೇ 37 ಜನಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲಂಬೋದಿಂದ 15 ಕಿ.ಮೀ ದೂರದಲ್ಲಿರುವ ಮಹರಾ ಜೈಲಿನಲ್ಲಿ 10,000 ಜನ ಕೈದಿಗಳಿರುವ ಸೌಲಭ್ಯವಿದೆ. ಆದರೆ 26,000ಕ್ಕೂ ಮೀರಿದ ಕೈದಿಗಳನ್ನು ಇರಿಸಲಾಗಿದೆ. ಕೋವಿಡ್ ಕಾರಣ ಕೆಲವರು ಅಸ್ವಸ್ಥರಾಗಿದ್ದರು. ಈ ಜೈಲಿನಲ್ಲಿದ್ದ 175ಕ್ಕೂ ಹೆಚ್ಚು ಜನರಿಗೆ ಕೋವಿಡ್ ಸೋಂಕು ತಗುಲಿತ್ತು. ಕೆಲವರು ಪ್ರಾಣ ಕಳೆದುಕೊಂಡಿದ್ದರು. ಪ್ರಾಣಭೀತಿಯಿಂದಾಗಿ ಆಕ್ರೋಶಗೊಂಡು ಗಲಾಟೆ ನಡೆದಿತ್ತು ಎಂದು ಪೊಲೀಸ್ ವಕ್ತಾರ ಅಜಿತ್ ರೋಹಾನ್ ಹೇಳಿದ್ದಾರೆ.

ಇದೇ ವೇಳೆ ಅನೇಕರು ಜೈಲಿನಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದರು. ಆ ಸಮಯದಲ್ಲಿ ಅವರನ್ನು ತಡೆಯಲು ಹೋದ ಇತರರು ಸೇರಿ ಒಟ್ಟು 37 ಜನರು ಗಾಯಗೊಂಡಿದ್ದಾರೆ. ಕೈದಿಗಳು ಅಡುಗೆ ಕೋಣೆ ಮತ್ತು ದಾಖಲೆ ಪತ್ರಗಳಿರುವ ಕೋಣೆಗೆ ಬೆಂಕಿ ಹಚ್ಚಿದ್ದಾರೆ. ಈ ಅವಘಡದಲ್ಲಿ ಗಾಯಗೊಂಡವರನ್ನು ಸ್ಥಳೀಯ ರಾಗಮಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದರು.

ಕೊರೊನಾವೈರಸ್ ಹರಡುವುದನ್ನು ತಡೆಯಲು ಶ್ರೀಲಂಕಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸಾಂಕ್ರಾಮಿಕ ವೈರಸ್‍ನಿಂದ 22,988 ಪ್ರಕರಣಗಳು ಮತ್ತು 109 ಸಾವುಗಳು ವರದಿಯಾಗಿವೆ ಎಂದು ಜಾನ್ಸ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

Comments

Leave a Reply

Your email address will not be published. Required fields are marked *