ಜೇಮ್ಸ್ ಚಿತ್ರೀಕರಣ – ಶೂಟಿಂಗ್ ನೋಡಲು ಸೇರಿದ ಅಪಾರ ಅಭಿಮಾನಿಗಳು

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪೂರ ಗ್ರಾಮ ಸೀಮಾ ವ್ಯಾಪ್ತಿಯ ವಾಣೀಭದ್ರೇಶ್ವರ ದೇವಸ್ಥಾನ ಬಳಿಯ ನಟ ಪುನೀತ ರಾಜಕುಮಾರ ನಟಿಸುತ್ತಿರುವ ಜೇಮ್ಸ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಚಿತ್ರ ತಂಡ ಹೊಸಪೇಟೆ ಸೇರಿದಂತೆ ನಾನಾ ಭಾಗಗಳಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ.

ಇಂದು ಗಂಗಾವತಿ ಭಾಗದಲ್ಲಿ ನಡೆಯುತ್ತಿರುವ ಶೂಟಿಂಗ್‍ಗೆ ಪುನೀತ್ ಆಗಮನದ ಸುದ್ದಿ ತಿಳಿದ ಅಭಿಮಾನಿಗಳು ಚಿತ್ರೀಕರಣ ಸ್ಥಳಕ್ಕೆ ಆಗಮಿಸಿದ್ದರು. ನೆಚ್ಚಿನ ನಟನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಅಭಿಮಾನಿಗಳನ್ನ ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಇಂದು ಶೂಟಿಂಗ್ ಸೆಟ್ ಗೆ ನಟಿ ಅನು ಪ್ರಭಾಕರ್ ಸಹ ಆಗಮಿಸಿದ್ದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪುನೀತ್ ರಾಜ್‍ಕುಮಾರ್, ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದ್ದು, ಜನರು ಸುರಕ್ಷತೆಯ ಕಡೆಗೆ ಹೆಚ್ಚು ಗಮನ ಹರಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ನಷ್ಟ ಸಂಭವಿಸಿದರೆ ಸಿನಿರಂಗದಿಂದ ಸಹಾಯ ಮಾಡುವ ಸಂದರ್ಭ ಬಂದರೆ ನಾವೆಲ್ಲರೂ ಕೈ ಜೋಡಿಸುತ್ತೇವೆ. ಕೊರೊನಾದಿಂದ ಚಿತ್ರ ಮಂದಿರಗಳು ಬಂದ್ ಆಗಿದ್ದವು. ಸದ್ಯ ಪುನಃ ಆರಂಭ ಮಾಡಲಾಗಿದೆ. ಜನರು ಮುಂಜಾಗೃತ ಕ್ರಮಗಳನ್ನು ಕೈಗೊಂಡು ಚಿತ್ರ ಮಂದಿರಕ್ಕೆ ಆಗಮಿಸಿ ಸಿನಿಮಾ ವೀಕ್ಷಣೆ ಮಾಡಿ, ಚಿತ್ರರಂಗ ಬೆಳೆಸಬೇಕು ಎಂದು ಮನವಿ ಮಾಡಿಕೊಂಡರು.

Comments

Leave a Reply

Your email address will not be published. Required fields are marked *