– ಗಂಟೆಗೆ 500 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ
ಹೈದರಾಬಾದ್: ಲಾಕ್‍ಡೌನ್ ಕಾರಣದಿಂದ ಬಂದ್ ಆಗಿದ್ದ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಜೂನ್ 11 ರಿಂದ ಭಕ್ತರಿಗೆ ದರ್ಶನ ಆರಂಭವಾಗಲಿದ್ದು, ಕೇಂದ್ರ ಸರ್ಕಾರ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಮಾರ್ಗದರ್ಶನ ಬಿಡುಗಡೆ ಮಾಡಿದ ಒಂದು ದಿನದ ಬಳಿಕ ಟಿಟಿಡಿ ಈ ಕುರಿತು ಸ್ಪಷ್ಟನೆ ನೀಡಿದೆ.
ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಜೂನ್ 11ರಿಂದ ಸರ್ವ ದರ್ಶನ ಆರಂಭವಾಗಲಿದೆ. ತಿಮ್ಮಪ್ಪನ ದರ್ಶನ ಪಡೆಯಲು ಗಂಟೆಗೆ 500 ಭಕ್ತರಿಗೆ ಅವಕಾಶ ಸಿಗಲಿದೆ. ಬೆಳಗ್ಗೆ 6.30ರಿಂದ ಸಂಜೆ 7.30ರವರೆಗೆ ಮಾತ್ರ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಸಿಗಲಿದೆ. ದಿನಕ್ಕೆ 6 ಸಾವಿರ ಮಂದಿಗೆ ಮಾತ್ರ ದೇವರ ದರ್ಶನ ಭಾಗ್ಯ ಸಿಗಲಿದೆ.

ಜೂನ್ 8ರಿಂದ ತಿರುಮಲದಲ್ಲಿ ಪ್ರಾರಂಭಿಕ ದರ್ಶನ ಕಾರ್ಯವನ್ನು ಆರಂಭಿಸಲಿದ್ದು, ಮೊದಲು ಸ್ಥಳೀಯರಿಗೆ ಹಾಗೂ ಟಿಟಿಡಿ ಸಿಬ್ಬಂದಿಗಳಿಗೆ ಮಾತ್ರ ದೇವರ ದರ್ಶನಕ್ಕೆ ಅನುಮತಿ ನೀಡಲಾಗಿದೆ. ಆ ಬಳಿಕವೇ ಟಿಟಿಡಿ ಸಮಿತಿ ಸರ್ವ ದರ್ಶನ ಸೇವೆಯನ್ನು ಆರಂಭಿಸಲಿದೆ. ಆನ್‍ಲೈನ್‍ನಲ್ಲಿ ದರ್ಶನದ ಟಿಕೆಟ್ ಸೇವೆಗಳು ಬುಕ್ ಮಾಡಿಕೊಳ್ಳಲು ಈಗಾಗಲೇ ಅವಕಾಶ ನೀಡಲಾಗಿದೆ.
ಕೇಂದ್ರ ಸರ್ಕಾರ ನೀಡಿರುವ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಪ್ರಯೋಗಿಕ ದರ್ಶನದ ಸೇವೆ ವೇಳೆ ಈ ಕುರಿತು ಸಿಬ್ಬಂದಿಗೂ ತರಬೇತಿ ನೀಡಲಾಗುವುದು. ಸಾಮಾಜಿಕ ಅಂತರ ಪಾಲನೆ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಬಳಕೆ ಮಾಡಲಾಗುತ್ತದೆ. ಕೇಂದ್ರ ಸೂಚನೆ ಅನ್ವಯ 10 ವರ್ಷಕ್ಕಿಂತ ಕೆಳಗಿನ ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ವಿವರಿಸಿದ್ದಾರೆ.


Leave a Reply