ಜೂ.ಎನ್‍ಟಿಆರ್ ಹುಟ್ಟುಹಬ್ಬಕ್ಕೆ ಪ್ರಶಾಂತ್ ನೀಲ್ ಸರ್ಪ್ರೈಸ್

– ಹೊಸ ಸಿನಿಮಾ ಮಾಡುವುದಾಗಿ ಘೋಷಣೆ

ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ತೆಲುಗಿನ ತಾರಕ್ ಎಂದೇ ಗುರುತಿಸಿಕೊಂಡಿರುವ ಜೂನಿಯರ್ ಎನ್‍ಟಿಆರ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದು, ಹೊಸ ಸಿನಿಮಾ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

ಜೂನಿಯರ್ ಎನ್‍ಟಿಆರ್ ಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಾರೆ ಎಂಬ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಇದೀಗ ಎನ್‍ಟಿಆರ್ ಹುಟ್ಟುಹಬ್ಬದ ದಿನದಂದು ಪ್ರಶಾಂತ್ ನೀಲ್ ಬಿಗ್ ಸರ್ಪ್ರೈಸ್ ನೀಡಿದ್ದು, ಅವರೊಂದಿಗೆ ಸಿನಿಮಾ ಮಾಡುತ್ತಿರುವ ಕುರಿತು ಸ್ವತಃ ಅವರೇ ಖಚಿತಪಡಿಸಿದ್ದಾರೆ.

ಜೂ.20ರಂದು ಜೂನಿಯರ್ ಎನ್‍ಟಿಆರ್ ಹುಟ್ಟುಹಬ್ಬವಾಗಿದ್ದು, ಇದೇ ವೇಳೆ ಅವರ 31ನೇ ಸಿನಿಮಾ ಕುರಿತು ಗುಟ್ಟು ಬಿಟ್ಟುಕೊಟ್ಟಿದ್ದಾರೆ. ತಮ್ಮ ಮುಂಚಿನ ಸಿನಿಮಾ ಜೂನಿಯರ್ ಎನ್‍ಟಿಆರ್ ಜೊತೆಗೆ ಎಂದು ಪರೋಕ್ಷವಾಗಿ ಹೇಳಿದ್ದು, ಜೂ.ಎನ್‍ಟಿಆರ್ ಪಕ್ಕದಲ್ಲಿ ಕುಳಿತಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ.

ಟ್ವೀಟ್ ಮಾಡಿರುವ ಅವರು, ನ್ಯೂಕ್ಲಿಯರ್ ಪ್ಲಾಂಟ್ ಪಕ್ಕದಲ್ಲಿ ಕುಳಿತರೆ ಹೇಗಿರುತ್ತದೆ ಎಂಬುದನ್ನು ನಾನು ಅಂತಿಮವಾಗಿ ತಿಳಿದೆ. ಮುಂದಿನ ಸಲ ಕ್ರೇಜಿ ಎನರ್ಜಿಗೆ ನನ್ನ ರೇಡಿಯೇಶನ್ ಸೂಟ್ ತರುತ್ತೇನೆ ಎಂದು ಜೂನಿಯರ್ ಎನ್‍ಟಿಆರ್ ಅವರ ತಾರಕ್9999 ಖಾತೆಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೆ ಹ್ಯಾಪಿ ಬರ್ತ್‍ಡೇ ಬ್ರದರ್!!! ಹ್ಯಾವ್ ಎ ಸೇಫ್ ಆ್ಯಂಡ್ ಗ್ರೇಟ್ ಡೇ, ಸೀ ಯು ಸೂನ್ ಎಂದು ಬರೆದುಕೊಂಡಿದ್ದಾರೆ. ಹ್ಯಾಶ್ ಟ್ಯಾಗ್‍ನೊಂದಿಗೆ ಹ್ಯಾಪಿ ಬರ್ತ್ ಡೇ ಎನ್‍ಟಿಆರ್, ಸ್ಟೇ ಹೋಮ್ ಸ್ಟೇ ಸೇಫ್ ಎಂದು ಬರೆದುಕೊಂಡಿದ್ದಾರೆ.

ಇದೆಲ್ಲದ ಮಧ್ಯೆ ಸುದ್ದಿಯೊಂದು ಹರಿದಾಡುತ್ತಿದ್ದು, ಜೂನಿಯರ್ ಎನ್‍ಟಿಆರ್ ಜೊತೆ ಸಿನಿಮಾ ಮಾಡಲು ಪ್ರಶಾಂತ್ ನೀಲ್ ಅವರಿಗೆ ಈಗಾಗಲೇ 2 ಕೋಟಿ ರೂ.ಗಳನ್ನು ಮುಂಗಡ ಹಣವನ್ನಾಗಿ ನೀಡಲಾಗಿದೆ ಎನ್ನಲಾಗಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಸಿನಿಮಾ ನಿರ್ಮಿಸುತ್ತಿದ್ದು, 2022ರಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಸಿನಿಮಾ ಕುರಿತು ಈ ವರೆಗೆ ಯಾವುದೇ ಅಧೀಕೃತ ಮಾಹಿತಿ ಹೊರ ಬಿದ್ದಿಲ್ಲ.

ಟ್ವೀಟ್ ಮಾಡುವ ಮೂಲಕ ಜೂ.ಎನ್‍ಟಿಆರ್ ಜೊತೆಗೆ ಸಿನಿಮಾ ಮಾಡುವ ಕುರಿತು ಪ್ರಶಾಂತ್ ನೀಲ್ ಸುಳಿವು ನೀಡಿದ್ದು, ಅಭಿಮಾನಿಗಳಲ್ಲಿ ಇದೀಗ ಭಾರೀ ಕುತೂಹಲ ಮನೆ ಮಾಡಿದೆ. ಯಾವ ಮಟ್ಟದಲ್ಲಿ ಸಿನಿಮಾ ಮೂಡಿ ಬರಲಿದೆ, ಯಾವ ರೀತಿಯ ಕಥೆ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಜೂನಿಯರ್ ಎನ್‍ಟಿಆರ್ ಹಾಗೂ ಪ್ರಶಾಂತ್ ನೀಲ್ ಅವರೇ ಉತ್ತರಿಸಬೇಕಿದೆ.

Comments

Leave a Reply

Your email address will not be published. Required fields are marked *