ಅಧಿಕೃತ: ಜೂನ್ 2021 ರವರೆಗೆ ಏಷ್ಯಾ ಕಪ್ ಮುಂದೂಡಿದ ಎಸಿಸಿ

– ಸುಗಮವಾಯ್ತು ಐಪಿಎಲ್ ಹಾದಿ

ನವದೆಹಲಿ: ಕೊರೊನಾ ವೈರಸ್ ಕಾರಣದಿಂದ ಸೆಪ್ಟೆಂಬರ್ ನಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು 2021ರ ಜೂನ್ ವರೆಗೂ ಮುಂದೂಡಲಾಗಿದೆ. ಈ ಕುರಿತು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧಿಕೃತ ಮಾಹಿತಿ ನೀಡಿದೆ.

ಈ ವರ್ಷ ಪಾಕಿಸ್ತಾನ ಟೂರ್ನಿ ಆಯೋಜಿಸಬೇಕಿತ್ತು. ಆದರೆ ಟೂರ್ನಿ ಮುಂದೂಡಿದ ಪರಿಣಾಮ ಶ್ರೀಲಂಕಾ ಟೂರ್ನಿಗೆ ಅತಿಥ್ಯವಹಿಸಲಿದೆ ಎಂದು ಎಸಿಸಿ ತಿಳಿಸಿದೆ. ಇತ್ತ 2020ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಯುವುದಿಲ್ಲ ಎಂದು ಬುಧವಾರವೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು.

ಉಳಿದಂತೆ 2020ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆಯೋಜಿಸುವ ಹಕ್ಕುಗಳು ಪಾಕಿಸ್ತಾನಕ್ಕೆ ಲಭಿಸಿತ್ತು. ಆದರೆ ಕೊರೊನಾ ಕಾರಣದಿಂದ ಮುಂದಿನ ವರ್ಷ ಪರಿಸ್ಥಿತಿ ಯಾವ ಹಂತಕ್ಕೆ ತಲುಪಲಿದೆ ಎಂಬ ಅನುಮಾನದಿಂದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಹಕ್ಕುಗಳನ್ನು ಶ್ರೀಲಂಕಾಗೆ ನೀಡಿದೆ. 2021ರ ಏಷ್ಯಾ ಕಪ್‍ಗೆ ಶ್ರೀಲಂಕಾ ಅತಿಥ್ಯ ವಹಿಸಲಿದ್ದು, 2022ರ ಟೂರ್ನಿಯನ್ನು ಪಾಕ್ ಆಯೋಜಿಸಲಿದೆ.

ಎಸಿಸಿ ಕಾರ್ಯಕಾರಿ ಮಂಡಳಿ ಟೂರ್ನಿ ಆಯೋಜಿಸುವ ಕುರಿತು ಎರಡು ಬಾರಿ ಸಭೆ ನಡೆಸಿ ಚರ್ಚೆ ನಡೆಸಿತ್ತು. ಸೆಪ್ಟೆಂಬರ್ ನಲ್ಲಿ ಟೂರ್ನಿ ಆಯೋಜಿಸಿದರೆ ಕೊರೊನಾ ಕಾರಣದಿಂದ ಆಟಗಾರರ ಆರೋಗ್ಯ ಸಮಸ್ಯೆ ಮತ್ತು ಹಲವು ತೊಡಕುಗಳು ಎದುರಾಗಲಿದೆ. ಆದ್ದರಿಂದ ಟೂರ್ನಿಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ಎಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇತ್ತ ಬಿಸಿಸಿಐ ಐಪಿಎಲ್ ಆವೃತ್ತಿಯನ್ನು ಅಕ್ಟೋಬರ್-ಸೆಪ್ಟೆಂಬರ್ ಅವಧಿಯಲ್ಲಿ ಆಯೋಜಿಸಲು ಚಿಂತನೆ ನಡೆಸಿತ್ತು. ಏಷ್ಯಾ ಕಪ್ ಮುಂದೂಡಿದ ಹಿನ್ನೆಲೆ ಐಪಿಎಲ್ ಹಾದಿ ಸುಗಮವಾಗಿದೆ ಎಂದು ಹೇಳಬಹುದು.

Comments

Leave a Reply

Your email address will not be published. Required fields are marked *