ಜು.5ರಿಂದ ಸಂವೇದಾ ತರಗತಿಗಳು ಆರಂಭ: ಸುರೇಶ್ ಕುಮಾರ್

ಬೆಂಗಳೂರು: ಕೋವಿಡ್ ಸೋಂಕಿನಿಂದಾಗಿ 2021-22ನೇ ಸಾಲಿನ ಭೌತಿಕ ತರಗತಿಗಳ ಆರಂಭ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ಜುಲೈ 5ರಿಂದ ಸಂವೇದಾ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ರಾಜ್ಯದ ಎಲ್ಲ ಶಿಕ್ಷಕರು ಸದರಿ ವೇಳಾಪಟ್ಟಿಯನ್ನು ತಮ್ಮ ಶಾಲೆಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ತಲುಪಿಸಿ, ಅವರೊಂದಿಗೆ ಸಮನ್ವಯ ಸಾಧಿಸಿ, ನಿಗದಿತ ಸಮಯದಲ್ಲಿ ನಿಗದಿತ ತರಗತಿಯ ವಿದ್ಯಾರ್ಥಿಗಳು ಸಂವೇದಾ ತರಗತಿಗಳನ್ನು ವೀಕ್ಷಿಸುವಂತೆ ಕ್ರಮ ಕೈಗೊಳ್ಳಬೇಕು. ನಂತರ ಪ್ರತಿಯೊಬ್ಬ ವಿದ್ಯಾರ್ಥಿಯ ಮೌಲ್ಯಮಾಪನ ವಿವರಗಳನ್ನು ನಿರ್ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಯಾವುದೇ ವಿದ್ಯಾರ್ಥಿಗೆ ದೂರದರ್ಶನ ವೀಕ್ಷಿಸಲು ಅವಕಾಶದ ಕೊರತೆಯಿದ್ದಲ್ಲಿ ಆಯಾ ಶಾಲೆಯ ಶಿಕ್ಷಕರು ಎಸ್‍ಡಿಎಂಸಿ ಸದಸ್ಯರ ನೆರವು ಪಡೆಯಬೇಕು. ವಿದ್ಯಾರ್ಥಿಗೆ ದೂರದರ್ಶನ ವೀಕ್ಷಿಸಲು ಅನುಕೂಲ ಮಾಡಿಕೊಡಬೇಕು. ಅಲ್ಲದೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳ ಕಲಿಕೆಯನ್ನು ಪರಿಣಾಮಕಾರಿಗೊಳಿಸಲು ಅವಕಾಶ ಕಲ್ಪಿಸಬೇಕೆಂದು ತಿಳಿಸಿದ್ದಾರೆ.

1ರಿಂದ 7ನೇ ತರಗತಿಗಳಿಗೆ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಮತ್ತು 8ರಿಂದ 10ನೇ ತರಗತಿವರೆಗೆ ಬೆಳಗ್ಗೆ 8ರಿಂದ ಸಂಜೆ 4.30ರವರೆಗೆ ನಡೆಯಲಿವೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ. ಮಕ್ಕಳು ಸಂವೇದಾ ತರಗತಿಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *