ಜುಲೈ ಮಧ್ಯ, ಆಗಸ್ಟ್ ಆರಂಭದಲ್ಲಿ ದಿನಕ್ಕೆ 1 ಕೋಟಿ ಲಸಿಕೆ ಲಭ್ಯ – ಕೇಂದ್ರ

ನವದೆಹಲಿ: ಜುಲೈ ಮಧ್ಯ ಭಾಗ, ಆಗಸ್ಟ್ ವೇಳೆ ದಿನಕ್ಕೆ 1 ಕೋಟಿ ಲಸಿಕೆ ಸಿಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜುಲೈ ಕೊನೆ ಅಥವಾ ಆಗಸ್ಟ್ ಆರಂಭದ ಹೊತ್ತಿಗೆ ಲಸಿಕೆಯ ಸಮಸ್ಯೆ ಬಗೆಹರಿಯಬಹುದು ಎಂದು ಐಸಿಎಂಆರ್ ಮುಖ್ಯಸ್ಥ ಬಲರಾಮ್ ಭಾರ್ಗವ ತಿಳಿಸಿದ್ದಾರೆ.

ದೇಶದಲ್ಲಿರುವ ಉತ್ಪಾದಕರು ಲಸಿಕೆ ಉತ್ಪಾದನೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಒಂದು ತಿಂಗಳ ಒಳಗಡೆ ಲಸಿಕೆ ಹಾಕಿಸಬೇಕೆಂದು ಬಯಸಿದ್ದಲ್ಲಿ ಇದು ಕೊರತೆಯಾಗಿ ಕಾಣುತ್ತದೆ. ನಮ್ಮ ಜನಸಂಖ್ಯೆ ಅಮೆರಿಕದ ಜನಸಂಖ್ಯೆಗಿಂತ 4 ಪಟ್ಟು ಜಾಸ್ತಿ ಇದೆ. ಹೀಗಾಗಿ ತಾಳ್ಮೆ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಇಬ್ಬರು ಕೇಂದ್ರ ಸಚಿವರು ಮತ್ತು ಕೇಂದ್ರ ಸುಪ್ರೀಂ ಕೋರ್ಟ್‍ಗೆ ನೀಡಿದ ಭರವಸೆಯನ್ನು ಉಲ್ಲೇಖಿಸಿ, ಡಿಸೆಂಬರ್ ವೇಳೆಗೆ ಇಡೀ ದೇಶಕ್ಕೆ ಲಸಿಕೆ ಹಾಕಿಸಲಾಗುವುದು ಎಂದು ಅವರು ತಿಳಿಸಿದರು. ಇದನ್ನೂ ಓದಿ : ರಾಜ್ಯದಲ್ಲಿ ಕಾಸು ಇದ್ದವರಿಗಷ್ಟೇನಾ ವ್ಯಾಕ್ಸಿನ್? – ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 2,000ವರೆಗೆ ಲಸಿಕೆ ಹಂಚಿಕೆ

ಕಳೆದ ತಿಂಗಳು ಕೇರಳ ಹೈಕೋರ್ಟ್‍ಗೆ ಕೇಂದ್ರ ಸರ್ಕಾರ ಡಿಸೆಂಬರ್ ವೇಳೆಗೆ 200 ಕೋಟಿ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿತ್ತು. ದೇಶದಲ್ಲಿ ಪ್ರಸ್ತುತ ತಿಂಗಳಿಗೆ ಸುಮಾರು 8.5 ಕೋಟಿ ಡೋಸ್ ಅಥವಾ ದಿನಕ್ಕೆ ಸುಮಾರು 28.33 ಲಕ್ಷ ಲಸಿಕೆ ಉತ್ಪಾದನೆಯಾಗುತ್ತದೆ. ಜುಲೈ ವೇಳೆಗೆ ಉತ್ಪಾದನೆ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು, ಸ್ಪುಟ್ನಿಕ್ ವಿ ಉತ್ಪಾದನೆಯೂ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿತ್ತು. ಇದನ್ನೂ ಓದಿ : ಹಳ್ಳಿ ಜನರಿಗೆ ಫ್ರೀ ಲಸಿಕೆ – ಮಹೇಶ್ ಬಾಬುವಿಗೆ ಅಭಿಮಾನಿಗಳಿಂದ ಮೆಚ್ಚುಗೆ

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ 30 ಲಕ್ಷ ಡೋಸ್‍ಗಳು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬೆಳಿಗ್ಗೆ ತಲುಪಿದೆ. ಭಾರತಕ್ಕೆ ವಿದೇಶದಿಂದ ಬಂದ ಅತ್ಯಂತ ದೊಡ್ಡ ಪ್ರಮಾಣದ ಲಸಿಕೆ ಇದಾಗಿದೆ. ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ರಷ್ಯಾದ ಈ ಲಸಿಕೆಯ ವಿತರಣೆಯ ಹೊಣೆಯನ್ನು ಹೊತ್ತುಕೊಂಡಿದ್ದು, ಈ ಸಂಸ್ಥೆ ಲಸಿಕೆಯ 1.5 ಲಕ್ಷ ಡೋಸ್ ಅನ್ನು ಮೇ 1ರಂದು ಪಡೆದುಕೊಂಡಿತ್ತು.

ದೇಶೀಯವಾಗಿಯೇ ಸ್ಪುಟ್ನಿಕ್ ಲಸಿಕೆಯ ತಯಾರಿಕೆಯು ಕೆಲವೇ ತಿಂಗಳಲ್ಲಿ ಆರಂಭವಾಗಲಿದ್ದು ಒಟ್ಟು 6 ಕಡೆಗಳಲ್ಲಿ ಲಸಿಕೆ ತಯಾರಾಗಲಿದೆ. ಧಾರವಾಡದ ಶಿಲ್ಪಾ ಬಯೊಲಜಿಕಲ್ಸ್ ನಲ್ಲಿ ಮೊದಲ 12 ತಿಂಗಳಲ್ಲಿ 5 ಕೋಟಿ ಲಸಿಕೆ ತಯಾರಿಯ ಗುರಿ ಹಾಕಿಕೊಳ್ಳಲಾಗಿದೆ ಎಂದು ಡಾ. ರೆಡ್ಡೀಸ್ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ : ರಾಯಚೂರು ಮೂಲದ ಕಂಪನಿಯಿಂದ ಕೋವಿಡ್ ಲಸಿಕೆ ಉತ್ಪಾದನೆ

Comments

Leave a Reply

Your email address will not be published. Required fields are marked *