ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಲೈನ್‍ಮ್ಯಾನ್

ಬೆಳಗಾವಿ: ಕಳೆದ ವರ್ಷವಷ್ಟೇ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

ಪಶ್ಚಿಮಘಟ್ಟ ಹಾಗೂ ಖಾನಾಪುರ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಬಳಿಯ ನವಿಲುತೀರ್ಥ ಜಲಾಶಯ ಭರ್ತಿಯಾಗಿ 11 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಮುನವಳ್ಳಿ ಪಟ್ಟಣದ ಯಲಿಗಾರ್ ಓಣಿಗೆ ನೀರು ನುಗ್ಗಿದೆ. ಯಲಿಗಾರ್ ಓಣಿಯಲ್ಲಿದ್ದ ವಿದ್ಯುತ್ ಕಂಬಗಳು ಸಹ ಮುಳುಗಡೆಯಾಗಿದ್ದು ವಿದ್ಯುತ್ ದುರಸ್ತಿಗೆ ಲೈನ್ ಮ್ಯಾನ್‍ಗಳು ಪರದಾಡುತ್ತಿದ್ದಾರೆ.

ಈ ಎಲ್ಲದರ ಮಧ್ಯೆ ಲೈನ್‍ಮ್ಯಾನ್ ಒಬ್ಬರು ಮುಳುಗಡೆಯಾದ ಪ್ರದೇಶದಲ್ಲಿ ಈಜಾಡಿ ವಿದ್ಯುತ್ ಕಂಬ ಬಳಿ ತೆರಳಿ ವಿದ್ಯುತ್ ಕಂಬ ಏರಿ ದುರಸ್ತಿ ಕಾರ್ಯ ಮಾಡಿದ್ದಾರೆ. ಸದ್ಯ ಲೈನ್‍ಮ್ಯಾನ್ ಕರ್ತವ್ಯ ನಿಷ್ಠೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಲಿಗಾರ್ ಓಣಿಯಲ್ಲಿ ನೀರು ನುಗ್ಗಿದ್ದರಿಂದ ವಿದ್ಯುತ್ ಸಮಸ್ಯೆ ಆಗದಿರಲಿ ಎಂದು ಜನರ ಸೇವೆಗಾಗಿ ಜೀವದ ಹಂಗು ತೊರೆದು ಲೈನ್‍ಮ್ಯಾನ್‍ಗಳು ಕರ್ತವ್ಯ ಮಾಡುತ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಾರ್ಕಂಡೇಯ ನದಿ ನೀರು ನುಗ್ಗಿ ಜಲಾವೃತಗೊಂಡಿದ್ದ ವಿದ್ಯುತ್ ಕಂಬ ಏರಿ ಲೈನ್‍ಮ್ಯಾನ್ ಒಬ್ಬರು ವಿದ್ಯುತ್ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Comments

Leave a Reply

Your email address will not be published. Required fields are marked *