ಜೀವಂತವಾಗಿ ಅರ್ಚಕನನ್ನು ಸುಟ್ಟು ಕೊಂದ ದುಷ್ಕರ್ಮಿಗಳು

– ಸಾವಿಗೂ ಮುನ್ನ ಪೊಲೀಸರಿಗೆ ಹೇಳಿಕೆ ನೀಡಿದ ಅರ್ಚಕ

ಜೈಪುರ: ಭೂ ವಿವಾದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಅರ್ಚಕರೊಬ್ಬರನ್ನು ಜೀವಂತವಾಗಿ ಸುಟ್ಟು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.

ಕರೌಲಿ ಜಿಲ್ಲೆಯ ಗ್ರಾಮವೊಂದರ ಅರ್ಚಕ ಬಾಬುಲಾಲ್ ಸಾವನ್ನಪ್ಪಿದ್ದು, ಜಿಲ್ಲೆಯ ಹಳ್ಳಿಯೊಂದರ ರಾಧಾ ಕೃಷ್ಣ ದೇವಾಲಯದ ಟ್ರಸ್ಟ್ ಗೆ ಸೇರಿದ ಸುಮಾರು 5.2 ಎಕರೆ ಭೂಮಿಯನ್ನು ಅವರು ಹೊಂದಿದ್ದರು. ಈ ಭೂಮಿಯನ್ನು ಅರ್ಚಕರಿಗೆ ಪ್ರಮುಖ ಆದಾಯದ ಮೂಲವಾಗಿ ನೀಡಲಾಗಿತ್ತು. ದೇವಾಲಯದ ಟ್ರಸ್ಟ್ ಗೆ ಸೇರಿದ ಭೂಮಿಯಾದರು ಇದರ ಉಸ್ತುವಾರಿಯನ್ನು ಅರ್ಚಕರಿಗೆ ನೀಡಲಾಗಿತ್ತು. ಅವರು ಗ್ರಾಮದ ದೇವಾಲಯದಲ್ಲಿ ಪೂಜೆ ಮಾಡುವ ಕಾರ್ಯವನ್ನು ಮಾಡುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.

ದೇವಾಲಯದಲ್ಲಿ ಸೇವೆ ಸಲ್ಲಿಸುವ ಕಾರಣದಿಂದ ಅರ್ಚಕರಿಗೆ ನೀಡುವ ಈ ಪದ್ದತಿಯನ್ನು ಮಂದಿತ ಮಾಫಿ ಎಂದು ಕರೆಯಲಾಗುತ್ತದೆ. ರಾಜಸ್ಥಾನದ ಹಲವು ಗ್ರಾಮಗಳಲ್ಲಿ ದೇವಾಲಯದ ಉಸ್ತುವಾರಿ ವಹಿಸುವ ಅರ್ಚಕರಿಗೆ ಆದಾಯದ ಮೂಲವಾಗಿ ನೀಡಲಾಗುತ್ತದೆ.

ಈ ಭೂಮಿ ಮೇಲೆ ಕಣ್ಣಿಟ್ಟಿದ್ದ ಗುಂಪು ವಿವಾದವನ್ನು ಸೃಷ್ಟಿ ಮಾಡಿತ್ತು. ಅರ್ಚಕ ಬಾಬುಲಾಲ್ ಹೊಂದಿದ್ದ ಜಮೀನು ತಮ್ಮದೆಂದು ಗ್ರಾಮದ ಪ್ರಭಾವಿ ಗುಂಪೊಂದು ಗಲಾಟೆ ಮಾಡಿತ್ತು. ಈ ಗಲಾಟೆಯ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ಅರ್ಚಕರ ಮೇಲೆ ದಾಳಿ ನಡೆಸಿದ್ದ ಗುಂಪು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿತ್ತು.

ತೀವ್ರ ಸುಟ್ಟ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಅರ್ಚಕರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರ್ಚಕರು ಸಾವನ್ನಪ್ಪಿದ್ದರು. ಸಾವನ್ನಪ್ಪುವ ಮುನ್ನ ಅರ್ಚಕರಿಂದ ಹೇಳಿಕೆ ಪಡೆದ ಪೊಲೀಸರು ಘಟನೆ ಸಂಬಂಧ ಪ್ರಮುಖ ಆರೋಪಿ ಕೈಲಾಶ್ ಮೀನಾನನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲು 6 ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಸ್ಥಳೀಯ ಎಸ್‍ಪಿ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *