ಜೀನ್ಸ್ ಧರಿಸಿದ್ದಕ್ಕೆ ಐವರು ಟೀಚರ್ಸ್‍ಗೆ ಶೋಕಾಸ್ ನೋಟಿಸ್

ಮುಂಬೈ: ಜೀನ್ಸ್ ಧರಿಸಿ ಶಾಲೆಗೆ ಬಂದಿದ್ದರಿಂದ ಐದು ಮಂದಿ ಟೀಚರ್ಸ್ ಗೆ ಶೋಕಾಸ್ ನೋಟಿಸ್ ನೀಡಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ನಡೆದಿದೆ.

ವಿಕ್ರಮ್ ಗರ್ ತಹಸಿಲ್‍ನ ಸರ್ಕಾರಿ ಶಾಲೆಯ ಟೀಚರ್ಸ್‍ಗೆ ಶಿಕ್ಷಣ ಇಲಾಖೆ ನೋಟಿಸ್ ನೀಡುವ ಮೂಲಕ ಸೂಚನೆ ಕೊಟ್ಟಿದೆ. ಕೆಲವು ದಿನಗಳ ಹಿಂದೆಯಷ್ಟೇ ಅಲ್ಲಿನ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿತ್ತು. ಅದರಲ್ಲಿ ಶಿಕ್ಷಕರು ಯೋಗ್ಯ ಉಡುಪುಗಳಲ್ಲಿ ಶಾಲೆಗೆ ಬರುವಂತೆ ತಿಳಿಸಲಾಗಿತ್ತು.

ಆದರೆ ಇದೀಗ ಟೀಚರ್ ಗಳು ಜೀನ್ಸ್ ಧರಿಸಿದ್ದರಿಂದ ಸರ್ಕಾರದ ಆದೇಶ ಮೀರಿರುವ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ನೀಡಲಾಗಿದೆ. ಇದರ ಪ್ರಕಾರ, 2 ದಿನಗಳಲ್ಲಿ ಟೀಚರ್ಸ್ ತಾವು ಮಾಡಿದ ತಪ್ಪಿಗೆ ಉತ್ತರ ನೀಡಬೇಕಾಗಿದೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಉತ್ತರಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಸರ್ಕಾರವು ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯೋಗಿಗಳು ಯಾವ ರೀತಿಯ ಉಡುಪುಗಳನ್ನು ಧರಿಸಿ ಕಚೇರಿಗೆ ಬರಬೇಕು ಎಂಬುದರ ಕುರಿತು ಸುತ್ತೋಲೆ ಹೊರಡಿಸಿತ್ತು. ಆ ಸಂದರ್ಭದಲ್ಲಿ ಸರ್ಕಾರ ಭಾರೀ ಟೀಕೆಗೆ ಗುರಿಯಾಗಿತ್ತು.

ಸರ್ಕಾರದ ಸುತ್ತೋಲೆಯಲ್ಲಿ ಏನಿತ್ತು..?
* ಟೀಚರ್ಸ್ ಮೈಗೆ ಅಂಟಿಕೊಳ್ಳುವಂತಹ, ಲೆಹೆಂಗಾ ಮುಂತಾದ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸುವಂತಿಲ್ಲ.
* ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಾಲೆಯಲ್ಲಿ ಶಿಕ್ಷಕರು ಜೀನ್ಸ್, ಟೀ ಶರ್ಟ್ ಧರಿಸುವಂತಿಲ್ಲ.
* ಅಧಿಕಾರಿಗಳು ಹಾಗೂ ನೌಕರರು ವಾರಕ್ಕೆ ಒಂದು ಬಾರಿಯಾದರೂ ಕಡ್ಡಾಯವಾಗಿ ಖಾದಿ ಬಟ್ಟೆ ಧರಿಸಬೇಕು.
* ಮಹಿಳೆಯರು ಸೀರೆ, ಸಲ್ವಾರ್, ಕುರ್ತಾ, ಪುರುಷರು ಶರ್ಟ್ ಮತ್ತು ಪ್ಯಾಂಟ್ ಧರಿಸಬೇಕು.

ಧರಿಸೋ ಚಪ್ಪಲಿಗೂ ನಿಯಮ:
* ಸರ್ಕಾರಿ ಕಚೇರಿಗಳಲ್ಲಿ ಸ್ಲಿಪ್ಪರ್ ಧರಿಸುವಂತಿಲ್ಲ.
* ಮಹಿಳೆಯರು ಮತ್ತು ಪುರುಷರು ಚಪ್ಪಲಿ ಅಥವಾ ಬೂಟುಗಳನ್ನು ಧರಿಸಬೇಕು.
* ಸ್ಲಿಪ್ಪರ್ ಗಳನ್ನು ಕಚೇರಿ ಅಥವಾ ಶಾಲೆಯಲ್ಲಿ ಬಳಸಬಾರದು ಎಂಬ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ.

Comments

Leave a Reply

Your email address will not be published. Required fields are marked *