ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಇನ್ನಷ್ಟು ಹೆಚ್ಚಾಗಲಿದೆ: ಸಚಿವ ಈಶ್ವರಪ್ಪ

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಹೆಚ್ವಾಗುತ್ತಿರುವುದರಿಂದ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿ ಕ್ರಮೇಣ ಕಡಿಮೆಯಾಗುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರತಿನಿತ್ಯ 2 ಸಾವಿರದ ತನಕ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆ ಸಭೆ ನಡೆಸಿದರು. ಸಭೆ ನಂತರ ಮಾತನಾಡಿದ ಅವರು, ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಏನೇನು ಅನುಕೂಲಗಳು ಬೇಕು ಎನ್ನುವ ಬಗ್ಗೆ ಸಿಮ್ಸ್ ನಿರ್ದೇಶಕರು, ಜಿಲ್ಲಾಧಿಕಾರಿ, ಡಿಹೆಚ್ ಓ ಜೊತೆ ಚರ್ಚೆ ನಡೆಸಲಾಗಿದೆ. 50 ಮಂದಿ ಡಿ ಗ್ರೂಪ್ ನೌಕರರು, 50 ಜನ ನರ್ಸ್ ಗಳು ಹಾಗೂ 25 ಮಂದಿ ವೈದ್ಯರು ಬೇಕು ಎಂದು ಕೇಳಿದ್ದಾರೆ. ವೈದ್ಯಕೀಯ ಕೋರ್ಸ್ ಮುಗಿಸಿರುವ ವೈದ್ಯರು 1 ವರ್ಷ ಕಡ್ಡಾಯವಾಗಿ ಸರ್ಕಾರಿ ಸೇವೆ ಸಲ್ಲಿಸಬೇಕು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವ ಅಪೇಕ್ಷೆ ಇರುವ ವೈದ್ಯರನ್ನು ಆಹ್ಚಾನಿಸಲಾಗುವುದು ಎಂದರು.

ಬೇರೆ ರಾಜ್ಯಗಳಲ್ಲಿ ಖಾಸಗಿ ವೈದ್ಯರು ಸಹ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು ಎಂಬ ಆದೇಶವಿದೆ. ಆದರೆ ನಮ್ಮಲ್ಲಿ ಅದನ್ನು ಇನ್ನೂ ಜಾರಿ ಮಾಡಿಲ್ಲ. ಖಾಸಗಿ ವೈದ್ಯರು ಸಮಾಜ ಸೇವೆ ಎಂದು ಭಾವಿಸಿ ಚಿಕಿತ್ಸೆ ನೀಡಲು ಮುಂದೆ ಬರಬೇಕು ಎಂದು ಪ್ರಾರ್ಥಿಸುತ್ತೇನೆ. ಕೆಲಸಕ್ಕೆ ಆಗಮಿಸಿದರೆ ಅವರಿಗೆ ಏನು ಹಣ ನೀಡಬೇಕೋ ಅದನ್ನು ನೀಡಲು ತಯಾರಿದ್ದೇವೆ ಎಂದರು.

ಭದ್ರಾವತಿ, ಶಿಕಾರಿಪುರ ಹಾಗೂ ತೀರ್ಥಹಳ್ಳಿಯಲ್ಲಿ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಸೋಂಕಿತರು ಹೆಚ್ಚಾದರೂ ನಾವು ತಯಾರಿದ್ದೇವೆ. ಎಲ್ಲ ಕಡೆ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯವರು ಸೋಂಕಿತರಿಗೆ ಇನ್ನು ಚಿಕಿತ್ಸೆ ಸಾಧ್ಯವಿಲ್ಲ ಎನ್ನುವ ಸಂದರ್ಭ ಎದುರಾದಾಗ ಕೊನೇ ವೇಳೆಯಲ್ಲಿ ರೋಗಿಯ ವೆಂಟಿಲೇಟರ್ ತೆಗೆದು ಮೆಗ್ಗಾನ್ ಗೆ ಕಳುಹಿಸುತ್ತಿದ್ದಾರೆ. ಇದು ಅಪರಾಧ ಅಂತಹವರಿಗೆ ನೋಟಿಸ್ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Comments

Leave a Reply

Your email address will not be published. Required fields are marked *