ಜಿಲ್ಲಾಡಳಿತದ ನಿರ್ಲಕ್ಷ್ಯ – ವಾರದಿಂದ ಅನ್‍ಲೋಡ್ ಆಗದೇ ಊರೂರು ಸುತ್ತಿರುವ ಆಕ್ಸಿಜನ್ ಟ್ಯಾಂಕರ್

ಹುಬ್ಬಳ್ಳಿ: ಕೊರೊನಾ ಮಹಾಮಾರಿಗೆ ದೇಶವೇ ತಲ್ಲಣಗೊಂಡಿದೆ. ಆಕ್ಸಿಜನ್ ಬೆಡ್ ಸಿಗದೇ ರೋಗಿಗಳು ಪ್ರಾಣ ಬಿಡುತ್ತಿದ್ದಾರೆ. ಆದ್ರೆ ಧಾರವಾಡ ಜಿಲ್ಲಾಡಳಿತದ ಹೊಣೆಗೇಡಿತನದಿಂದ ಆಕ್ಸಿಜನ್ ಸರಬರಾಜು ಮಾಡಲು ಬಂದ ಕಂಟೇನರ್ ವಾರದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಊರೂರು ಸುತ್ತುವಂತಾಗಿದೆ.

ಹೌದು. ಒಂದು ಕಡೆ ಆಕ್ಸಿಜನ್ ಇಲ್ಲದೆ ರೋಗಿಗಳು ಸತ್ತರೆ, ಇನ್ನೊಂದು ಕಡೆ ಬಂದ ಆಕ್ಸಿಜನ್ ಉಪಯೋಗ ಮಾಡಕೊಳ್ಳದೇ ಅಧಿಕಾರಿಗಳು ನಿಷ್ಕಾಳಜಿ ತೋರಿಸಿದ್ದಾರೆ. ಒಂದು ವಾರದೆ ಹಿಂದೆ ಮಧ್ಯಪ್ರದೇಶದಿಂದ ಹುಬ್ಬಳ್ಳಿಗೆ ಆಕ್ಸಿಜನ್ ತುಂಬಿದ ಕಂಟೇನರ್ ಬಂದಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ನಿಂತರು ಆಕ್ಸಿಜನ್ ಅನ್ ಲೋಡ್ ಮಾಡಲೇ ಇಲ್ಲ. ಈ ವಾಹನ ಇಲ್ಲಿ ಏತಕ್ಕೆ ಬಂದಿದೆ ಎಂದು ಯಾರು ಕೇಳಿಲ್ಲ. ಮೂರು ದಿನಗಳ ನಂತರ ಬೆಳಗಾವಿಗೆ ಆಕ್ಸಿಜನ್ ಕಂಟೇನರ್ ಕಳುಹಿಸಿಕೊಡಲಾಗಿತ್ತು. ಆದ್ರೆ ಅಲ್ಲಿಯೂ ಎರಡೂ ದಿನ ನಿಂತು ನಿಂತು ಟ್ಯಾಂಕರ್ ಮರಳಿ ಧಾರವಾಡದ ಬೇಲೂರ ಕೈಗಾರಿಕಾ ಪ್ರದೇಶದಲ್ಲಿ ಎರಡೂ ದಿನ ನಿಂತ ವಾಹನ ನಿಂತಿದೆ. ಅಲ್ಲಿಯೂ ಆಕ್ಸಿಜನ್ ಡಂಪ್ ಮಾಡಿಲ್ಲ. ಆಕ್ಸಿಜನ್ ಖಾಲಿ ಆಗದ ಕಾರಣ ಈಗ ಧಾರವಾಡದ ನವಲೂರ ಗ್ರಾಮಕ್ಕೆ ಬಂದು ವಾಹನ ನಿಂತಿದೆ.

ಅಧಿಕಾರಿಗಳ ಬೇಜವಾಬ್ದಾರಿತನದಿಂದ ಒಂದು ವಾರದಿಂದ 40 ಟನ್ ಸಾಮರ್ಥ್ಯದ ಆಕ್ಸಿಜನ್ ಖಾಲಿ ಮಾಡಲು ಎರಡು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಇದರ ಮಧ್ಯೆ ಕಂಟೇನರ್ ಮಾತ್ರ ಅತ್ತಿಂದಿತ್ತ ಸುತ್ತಾಡುತ್ತಿದೆ. ಒಂದು ಮಾಹಿತಿ ಪ್ರಕಾರ ಆಕ್ಸಿಜನ್ ವಾಹನ ಹುಬ್ಬಳ್ಳಿ ಕಿಮ್ಸ್ ಹಾಗೂ ಬೆಳಗಾವಿ ಬಿಮ್ಸ್ ಆಸ್ಪತ್ರೆ ಒಳಗೆ ಹೋಗಲು ಸ್ಥಳಾವಕಾಶದ ಕೊರತೆ ಕಾರಣ ಎನ್ನಲಾಗಿದೆ. ಇದಕ್ಕೆ ಪರ್ಯಾಯವಾಗಿ ಬೇಲೂರು ಕೈಗಾರಿಕಾ ಪ್ರದೇಶದಲ್ಲಿಯೂ ಆಕ್ಸಿಜನ್ ತೆರವುಗೊಳಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದ್ದು, ಇದು ಎರಡು ಜಿಲ್ಲಾಡಳಿತಗಳ ಅಸಮರ್ಥ ಕಾರ್ಯವೈಖರಿಗೆ ಹಿಡಿದ ಕೈನ್ನಡಿಯಾಗಿದೆ.

Comments

Leave a Reply

Your email address will not be published. Required fields are marked *