ಜಿಲ್ಲಾಡಳಿತಗಳ ಎಡವಟ್ಟಿಗೆ ಬೀದಿಗೆ ಬಿದ್ದ ವೃದ್ಧ

– ಮಂಡ್ಯ, ಚಿತ್ರದುರ್ಗದ ನಿರ್ಲಕ್ಷ್ಯದಿಂದ ರಸ್ತೆಯಲ್ಲಿ ಅಸ್ವಸ್ಥ

ಚಿತ್ರದುರ್ಗ: ಕೊರೊನಾ ನಡುವೆಯೂ ಎರಡು ಜಿಲ್ಲಾಡಳಿತಗಳ ಎಡವಟ್ಟಿನಿಂದ ವಯೋವೃದ್ಧ ಬೀದಿಪಾಲಾಗಿರುವ ಮನಕಲಕುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.

ಮಾರ್ಚ್ ತಿಂಗಳಲ್ಲಿ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಹೊರಟಿದ್ದ ಶಿವಮೂರ್ತಿ ಅವರನ್ನು ತಡೆದ ಮಂಡ್ಯ ಜಿಲ್ಲಾಡಳಿತ 30 ದಿನಗಳ ಕಾಲ ಕ್ವಾರಂಟೈನ್ ಮಾಡಿತ್ತು. ಬಳಿಕ ಅವರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸ್ವ-ಗ್ರಾಮಕ್ಕೆ ಶಿವಮೂರ್ತಿಯವರನ್ನು ಕಳುಹಿಸುವ ಬದಲಾಗಿ ಸರ್ಕಾರಿ ವಾಹನದಲ್ಲಿ ಚಿತ್ರದುರ್ಗಕ್ಕೆ ಕಳುಹಿಸಿದೆ. ಅಲ್ಲದೇ ಅಧಿಕಾರಿಗಳ ಎಡವಟ್ಟಿನಿಂದಾಗಿ ಚಿತ್ರದುರ್ಗಕ್ಕೆ ಬಂದ ಶಿವಮೂರ್ತಿ ಅವರನ್ನು ಅಲ್ಲೂ ಸಹ ಹಾಸ್ಟಲ್ ಕ್ವಾರಂಟೈನ್ ಮಾಡಿ, ಅಲ್ಲಿಯೂ ವರದಿ ನೆಗೆಟಿವ್ ಬಂದಿದೆ.

ಆಗಲಾದರೂ ಕಾಳಜಿ ವಹಿಸಬೇಕಾದ ಚಿತ್ರದುರ್ಗ ಜಿಲ್ಲಾಡಳಿತ ಅವರ ಕೈಗೆ ನೆಗೆಟಿವ್ ವರದಿ ಕೊಟ್ಟು ಊರಿಗೆ ತೆರಳುವಂತೆ ಹೇಳಿ ಕೈ ತೊಳೆದುಕೊಂಡಿದೆ. ಆದರೆ ಲಾಕ್‍ಡೌನ್‍ನಿಂದಾಗಿ ದಾರಿಕಾಣದ ವೃದ್ಧ ಅನ್ನ, ನೀರಿಗೂ ಪರದಾಡ್ತಾ, ಯಾವುದೇ ವಾಹನ ಸಿಗಲಾರದೆ, ಜೇಬಿನಲ್ಲಿ ಹಣ ಸಹ ಇಲ್ಲದೆ ನಡೆದುಕೊಂಡೇ ಹಿರಿಯೂರು ತಲುಪಿದರು. ಅಲ್ಲಿ ತೀವ್ರ ಅಸ್ವಸ್ಥರಾಗಿ ರಸ್ತೆ ಬದಿ ಬಿದ್ದಿದ್ದರು. ಆಗ ವೃದ್ಧನ ಸ್ಥಿತಿ ಕಂಡ ಹಿರಿಯೂರಿನ ಯುವಕ ರಮೇಶ್ ಆಸರೆಯಾಗಿದ್ದಾರೆ.

ಮಾನವೀಯತೆಯಿಂದ ಅವರನ್ನು ಹಾರೈಕೆ ಮಾಡಿದ್ದಾರೆ. ಈಗ ಸಂಪೂರ್ಣ ಗುಣಮುಖರಾಗಿರುವ ಶಿವಮೂರ್ತಿಯವರು ಊರಿಗೆ ತೆರಳಲು ಸಿದ್ಧರಾಗಿದ್ದು, ಹಿರಿಯೂರು ತಹಶೀಲ್ದಾರ್ ಪಾಸ್ ನೀಡಲು ಕಿರಿಕ್ ತೆಗೆದಿದ್ದಾರೆ. ಮಂಡ್ಯ ಜಿಲ್ಲಾಡಳಿತದಿಂದ ಪಾಸ್ ತೆಗೆದುಕೊಳ್ಳುವಂತೆ ಹೇಳುವ ಮೂಲಕ ಬೇಜವಾಬ್ದಾರಿ ತೋರಿದ್ದಾರೆ. ಹಾಗೆಯೇ ಆ ವೃದ್ಧನಿಗೆ ಆಶ್ರಯ ನೀಡಿದ ಯುವಕನ ಮೇಲೆಯೂ ಅಧಿಕಾರಿಗಳು ದೌರ್ಜನ್ಯ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

Comments

Leave a Reply

Your email address will not be published. Required fields are marked *