ಜಿಟಿ ಜಿಟಿ ಮಳೆ – ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಪರದಾಟ

ರಾಯಚೂರು: ಜಿಲ್ಲೆಯಲ್ಲಿ ಬುಧವಾರ ಸಂಜೆಯಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅಡ್ಡಿಯುಂಟು ಮಾಡಿದೆ.

ಗುರುವಾರ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳು ಮಳೆಯಿಂದ ನಿಗದಿತ ಸಮಯಕ್ಕೆ ತಲುಪಲು ಕಷ್ಟವಾಗಿದೆ. ಅದರಲ್ಲೂ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆಯುಂಟಾಗಿದೆ.

ಮಳೆ ಕಾರಣಕ್ಕೆ ಪರೀಕ್ಷೆಗೆ ಗೈರಾಗದಂತೆ ಶಿಕ್ಷಕರು ರಾತ್ರಿಯಿಂದಲೇ ವಿದ್ಯಾರ್ಥಿಗಳಿಗೆ ಫೋನ್ ಕರೆ ಮಾಡಿ ತಿಳಿಸಿದ್ದಾರೆ. ಪರೀಕ್ಷೆ ಸ್ವಲ್ಪ ತಡವಾಗಿ ಬಂದವರಿಗೂ ಅವಕಾಶ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಆರಂಭವಾಗುತ್ತದೆ. 10:30 ರವರೆಗೆ ಹೆಚ್ಚುವರಿ ಸಮಯ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಗೈರಾಗದಂತೆ ತಿಳಿಸಲಾಗಿದೆ. ಮಳೆಯಲ್ಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದು, ಪರೀಕ್ಷೆಗೆ ಹಾಜರಾಗಿದ್ದಾರೆ.

ಜಿಲ್ಲೆಯ 179 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 30,503 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜುಲೈ 19 ರಂದು ನಡೆದ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 246 ವಿದ್ಯಾರ್ಥಿಗಳು ಗೈರಾಗಿದ್ದರು. ಹೀಗಾಗಿ ಇಂದು ನಡೆಯುವ ಭಾಷಾ ಪರೀಕ್ಷೆಗೆ ಯಾವ ವಿದ್ಯಾರ್ಥಿಗಳು ಗೈರಾಗಬಾರದು ಎಂದು ಶಿಕ್ಷಕರು ಹೆಚ್ಚು ನಿಗಾವಹಿಸಿದ್ದಾರೆ. ಇದನ್ನೂ ಓದಿ: ಇಂದು SSLC ಕೊನೆ ಪರೀಕ್ಷೆ- ಕನ್ನಡ, ಇಂಗ್ಲಿಷ್, ಹಿಂದಿ ಎಕ್ಸಾಂ

Comments

Leave a Reply

Your email address will not be published. Required fields are marked *