ಜಮ್ಮು ವಾಯು ನೆಲೆ ಮೇಲೆ ಡ್ರೋನ್ ದಾಳಿ – 2 ಸ್ಫೋಟ, ಇಬ್ಬರಿಗೆ ಗಾಯ

ಜಮ್ಮು:  ಭಾರತದ ಸೇನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಡ್ರೋನ್ ದಾಳಿ ನಡೆದಿದೆ.   ಭಾನುವಾರ ನಸುಕಿನ ವೇಳೆಯಲ್ಲಿ ಜಮ್ಮು ವಾಯು ನೆಲೆಯ ಮೇಲೆ ಎರಡು ಡ್ರೋನ್ ಮೂಲಕ ಸ್ಫೋಟಕವನ್ನು ಸ್ಫೋಟಿಸಲಾಗಿದೆ.

ಟೆಕ್ನಿಕಲ್ ಪ್ರದೇಶದಲ್ಲಿರುವ ಕಟ್ಟಡದ ಮೇಲ್ಭಾಗದಲ್ಲಿ ಬೆಳಗ್ಗೆ 1:45ಕ್ಕೆ ಮೊದಲ ಸ್ಫೋಟ ಸಂಭವಿಸಿದೆ. ಈ ಸ್ಫೋಟ ಸಂಭವಿಸಿದ 5 ನಿಮಿಷದಲ್ಲಿ ತೆರೆದ ಪ್ರದೇಶದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮೇಲ್ಭಾಗ ಒಡೆದು ಹೋಗಿದೆ.

ಈ ಸ್ಫೋಟದಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದ ಮೇಲೆ ಡ್ರೋನ್ ಮೂಲಕ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಬಳಸಿ ಸ್ಫೋಟ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ರಾಷ್ಟ್ರೀಯ ಬಾಂಬ್ ದತ್ತಾಂಶ ಕೇಂದ್ರದ ತಜ್ಞರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.  ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿಯ ಮೇಲೆ ಡ್ರೋನ್ ದಾಳಿ – ಹೊತ್ತಿ ಉರಿದ ಘಟಕಗಳು

ಜಮ್ಮು ವಿಮಾನ ನಿಲ್ದಾಣಕ್ಕೆ ಸತ್ವಾರಿ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತದೆ. ಇಲ್ಲಿ ನಾಗರಿಕ ವಿಮಾನಗಳು ಲ್ಯಾಂಡ್ ಆದರೂ ಏರ್ ಟ್ರಾಫಿಕ್ ಕಟ್ರೋಲ್(ಎಟಿಸಿ) ಭಾರತೀಯ ವಾಯುಪಡೆಯ ನಿಯಂತ್ರಣದಲ್ಲಿದೆ.

ಈ ವಿಮಾನ ನಿಲ್ದಾಣ ಜಮ್ಮು ತಾವಿ ರೈಲು ನಿಲ್ದಾಣದಿಂದ 6 ಕಿ.ಮೀ, ಪಂಜಾಬ್‍ನ ಪಠಾಣ್‍ಕೋಟ್ ವಿಮಾನ ನಿಲ್ದಾಣದಿಂದ 110 ಕಿ.ಮೀ ಮತ್ತು ರಾಷ್ಟ್ರೀಯ ಹೆದ್ದಾರಿ 1 ರಿಂದ 1 ಕಿ.ಮೀ ದೂರದಲ್ಲಿದೆ.

ಭಾರತದ ಗಡಿಯಲ್ಲಿ ಪಾಕಿಸ್ತಾನ ಕಡಿಮೆ ಬೆಲೆ ಚೀನಿ ಡ್ರೋನ್ ಮೂಲಕ ಶಸ್ತ್ರಾಸ್ತ್ರವನ್ನು ಮೇಲಿನಿಂದ ಕೆಳಗಡೆ ಉದುರಿಸುತ್ತಿದ್ದ ಪ್ರಕರಣಗಳು ವರದಿಯಾಗಿದ್ದವು. ಈ ವೇಳೆ ಹಲವು ಡ್ರೋನ್‍ಗಳನ್ನು ಹೊಡೆದು ಉರುಳಿಸುವ ಮೂಲಕ ಭಾರತದ ಸೇನಾಪಡೆಗಳು ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದವು.

Comments

Leave a Reply

Your email address will not be published. Required fields are marked *