ಜಮ್ಮು- ಕಾಶ್ಮೀರದ 33 ನಾಯಕರ ವಿದೇಶ ಪ್ರವಾಸಕ್ಕೆ ತಡೆ

– ದುಬೈಗೆ ಹೊರಟಿದ್ದ ಮಾಜಿ ಶಾಸಕನನ್ನ ತಡೆದ ಸಿಬ್ಬಂದಿ

ಶ್ರೀನಗರ: ಜಮ್ಮು ಕಾಶ್ಮೀರದ 33 ನಾಯಕರ ವಿದೇಶ ಪ್ರವಾಸಕ್ಕೆ ತಡೆ ನೀಡಿ ಆದೇಶಿಸಲಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮಾಜಿ ಶಾಸಕ ಅಲ್ತಾಫ್ ಅಹ್ಮದ್ ವಾನಿ ದುಬೈಗೆ ಹೊರಟಿದ್ದರು. ಆದ್ರೆ ವಿಮಾನ ನಿಲ್ದಾಣದ ಸಿಬ್ಬಂದಿ ಅವರ ಪ್ರಯಾಣಕ್ಕೆ ಅವಕಾಶ ನೀಡಿಲ್ಲ.

ಜಮ್ಮು ಕಾಶ್ಮೀರದ ವಿವಿಧ ಪಕ್ಷಗಳ ಒಟ್ಟು 33 ನಾಯಕರ ಹೆಸರು ಆದೇಶದ ಪಟ್ಟಿಯಲ್ಲಿದೆ. ಆದ್ರೆ ಮಾಜಿ ಮುಖ್ಯಮಂತ್ರಿ ಡಾ.ಫಾರೂಖ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರ ಹೆಸರನ್ನ ಈ ಪಟ್ಟಿಯಲ್ಲಿ ಸೇರ್ಪಡೆ ಮಾಡಿಲ್ಲ.

ವಿದೇಶ ಪ್ರಯಾಣ ತಡೆ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಅಲ್ತಾಫ್ ಅಹ್ಮದ್ ವಾನಿ, ನಾನು ದುಬೈನಲ್ಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೊರಟಿದ್ದೆ. ಕುಟುಂಬ ಸಮೇತರಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿದ ವೇಳೆ ಇಮಿಗ್ರೇಷನ್ ಕೌಂಟರ್ ನಲ್ಲಿ ಅಧಿಕಾರಿಗಳು ನನ್ನ ಬೇರೆ ಕೊಠಡಿಗೆ ಕರೆದುಕೊಂಡು ಹೋದರು. ಪಾಸ್‍ಪೋರ್ಟ್ ನಲ್ಲಿ ಸಮಸ್ಯೆ ಇರಬಹುದು ಎಂದು ತಿಳಿದುಕೊಂಡಿದ್ದೆ. ಸುಮಾರು ಮೂರು ಗಂಟೆ ಕಾಲ ನನ್ನನ್ನು ಕೊಠಡಿಯಲ್ಲಿ ಕೂರಿಸಲಾಗಿತ್ತು. ಆದ್ರೆ ನನ್ನ ಪ್ರಯಾಣ ತಡೆದ ಬಗ್ಗೆ ಯಾರೂ ಸಹ ಸ್ಪಷ್ಟೀಕರಣ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಮ್ಮು ಕಾಶ್ಮೀರ ಪೊಲೀಸರ ಮಧ್ಯಸ್ಥಿಕೆ ನಂತರ ಹೊರಗೆ ಕಳುಹಿಸಿ, ಆದೇಶದ ಪ್ರಕಾರ ವಿದೇಶ ಪ್ರವಾಸ ಕೈಗೊಳ್ಳುವಂತಿಲ್ಲ ಎಂಬ ಮಾಹಿತಿ ನೀಡಿದರು. ಕುಟುಂಬಸ್ಥರಿಗೆ ದುಬೈಗೆ ತೆರಳುವಂತೆ ಹೇಳಿ, ಅಧಿಕಾರಿಗಳಿಗೆ ಈ ಕುರಿತು ಸ್ಪಷ್ಟನೆ ನೀಡಬೇಕೆಂದು ತಿಳಿಸಿ ಹಿಂದಿರುಗಿ ಬಂದಿದ್ದೇನೆ. ಪಾಸ್‍ಪೋರ್ಟ್ ಹಿಂದಿರುಗಿಸಿರು ಅಧಿಕಾರಿಗಳು ಮಾರ್ಚ್ 2021ರವರೆಗೆ ನಾನು ವಿದೇಶಕ್ಕೆ ತೆರಳುವ ಹಾಗಿಲ್ಲ ಎಂದು ಸೂಚಿಸಿದ್ದಾರೆ. ಸದ್ಯ ನಾನು ದೆಹಲಿಯಲ್ಲಿದ್ದೇನೆ ಅಂತ ಅಲ್ತಾಫ್ ವಾನಿ ಹೇಳಿದ್ದಾರೆ.

ಆಗಸ್ಟ್ 5, 2019ರಂದು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ವೇಳೆ ಕೇಂದ್ರ ಒಟ್ಟು 37 ನಾಯಕರ ವಿದೇಶ ಪ್ರವಾಸಕ್ಕೆ ತಡೆ ಹಿಡಿದಿತ್ತು. ಮೂರು ತಿಂಗಳ ನಂತರ ಪಟ್ಟಿಯಿಂದ ಕೆಲವರ ಹೆಸರು ಕೈ ಬಿಟ್ಟು 33 ನಾಯಕರ ವಿದೇಶ ಪ್ರವಾಸ ಕೈಗೊಳ್ಳದಂತೆ ಆದೇಶದಲ್ಲಿ ಸೂಚಿಸಲಾಗಿದೆ.

Comments

Leave a Reply

Your email address will not be published. Required fields are marked *