ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ- ಇಬ್ಬರು ಯೋಧರು, ಓರ್ವ ಪೊಲೀಸ್ ಹುತಾತ್ಮ

ಶ್ರೀನಗರ: ಉಗ್ರರ ಅಟ್ಟಹಾಸಕ್ಕೆ ಜಮ್ಮು ಕಾಶ್ಮೀರದಲ್ಲಿ ಇಬ್ಬರು ಸಿಆರ್ ಪಿಎಫ್ ಯೋಧರು ಹಾಗೂ ಓರ್ವ ಪೊಲೀಸ್ ಹುತಾತ್ಮರಾಗಿದ್ದಾರೆ.

ಜಮ್ಮು ಕಾಶ್ಮಿರದ ಬರಾಮುಲ್ಲಾದಲ್ಲಿ ಜಂಟಿಯಾಗಿ ಗಸ್ತು ತಿರುಗುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದು, ಕೀರಿ ಪ್ರದೇಶದಲ್ಲಿ ಯೋಧರು ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್ ಹುತಾತ್ಮರಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಈ ಪ್ರದೇಶವನ್ನು ಯೋಧರು ಹಾಗೂ ಪೊಲೀಸರು ಸುತ್ತುವರಿದಿದ್ದು, ಭಯೋತ್ಮಾದಕರನ್ನು ಹಡೆಮುರಿ ಕಟ್ಟುವ ಕಾರ್ಯಾಚರಣೆ ನಡೆಸಿದ್ದಾರೆ.

ಓರ್ವ ವಿಶೇಷ ಪೊಲೀಸ್ ಅಧಿಕಾರಿ(ಎಸ್‍ಪಿಒ) ಸ್ಥಳದಲ್ಲೇ ಹುತಾತ್ಮರಾಗಿದ್ದು, ಇಬ್ಬರು ಸಿಆರ್‍ಪಿಎಫ್ ಯೋಧರು ಘಟನೆ ವೇಳೆ ತೀವ್ರ ಗಾಯಗೊಂಡಿದ್ದರು. ಹೀಗಾಗಿ ನಂತರ ಇವರಿಬ್ಬರು ಸಹ ಮೃತಪಟ್ಟರು ಎಂದು ಜಮ್ಮು ಕಾಶ್ಮಿರ ಇನ್‍ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಪ್ರಯೋಗಾತ್ಮಕವಾಗಿ 4ಜಿ ಹೈಸ್ಪೀಡ್ ಇಂಟರ್ ನೆಟ್ ಬಳಕೆಗೆ ಅವಕಾಶ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಗಂಡರ್‍ಬಲ್ ಹಾಗೂ ಉಧಂಪೂರ್ ಗಳಲ್ಲಿ ಪ್ರಾಯೋಗಿಕವಾಗಿ 4ಜಿ ಹೈ ಸ್ಪೀಡ್ ಇಂಟರ್ ನೆಟ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿ, ಬಳಿಕ ಎರಡೂ ಕೇಂದ್ರಾಡಳಿತ ಪ್ರದೇಶಗಳ ತಲಾ ಒಂದು ಜಿಲ್ಲೆಯಲ್ಲಿ ಇಂಟರ್ ನೆಟ್ ಸೇವೆಯನ್ನು ಪ್ರಾರಂಭಿಸಿದೆ. ಈ ಮೂಲಕ ಒಂದು ವರ್ಷಕ್ಕೂ ಹೆಚ್ಚು ಅವಧಿ ಬಳಿಕ ಜಮ್ಮು ಕಾಶ್ಮೀರದಲ್ಲಿ 4ಜಿ ಇಂಟರ್ ನೆಟ್ ಸೇವೆ ಆರಂಭಿಸಿದಂತಾಗಿದೆ. ಆಗಸ್ಟ್ 5, 2019ರಂದು 370ನೇ ವಿಧಿ ರದ್ದುಗೊಳಿಸಿ ಆದೇಶ ಹೊರಡಿಸಿದಾಗಿನಿಂದ ಜಮ್ಮು ಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆಯನ್ನು ಕಡಿತಗೊಳಿಸಲಾಗಿದೆ.

Comments

Leave a Reply

Your email address will not be published. Required fields are marked *