ಜಮೀನಿಗೆ ತೆರಳುತ್ತಿದ್ದ ತಾಯಿ-ಮಗನ ಮೇಲೆ ಚಿರತೆ ದಾಳಿ

– ಗ್ರಾಮಸ್ಥರಲ್ಲಿ ಆತಂಕ

ಹಾಸನ: ಜಮೀನಿಗೆ ತೆರಳುತ್ತಿದ್ದ ತಾಯಿ-ಮಗನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೈರಗೊಂಡನಹಳ್ಳಿ ಬೋವಿಕಾಲೋನಿಯಲ್ಲಿ ನಡೆದಿದೆ.

ಕಿರಣ್ ಮತ್ತು ಚಂದ್ರಮ್ಮ ಚಿರತೆ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಅರಸೀಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇಂದು ಬೆಳಗ್ಗೆ 7.30ರ ಸಮಯದಲ್ಲಿ ಜಾನುವಾರುಗಳೊಂದಿಗೆ ಜಮೀನಿಗೆ ತೆರಳುತ್ತಿದ್ದಾಗ ಚಿರತೆ ದಾಳಿ ಮಾಡಿದೆ. ಹಗಲು ವೇಳೆಯೇ ಚಿರತೆ ಕಾಣಿಸಿಕೊಂಡು ದಾಳಿ ನಡೆಸುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ದಾಳಿ ಮಾಡಿದ ಚಿರತೆಯ ಫೋಟೋವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಆದಷ್ಟು ಬೇಗ ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಜನರು ಆಗ್ರಹಿಸಿದ್ದಾರೆ.

ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಮೇಲೆ ಚಿರತೆ ಕಾಣಿಸಿಕೊಂಡಿದೆ. ಈ ಭಾಗದಲ್ಲಿ ಬೆಟ್ಟಗಳು ಇರುವುದರಿಂದ ಚಿರತೆಗಳು ಇಲ್ಲಿ ಹೆಚ್ಚಾಗಿವೆ. ಈ ಹಿಂದೆ ರಾತ್ರಿ ವೇಳೆ ಪಟ್ಟಣದೊಳಗೆ ಬಂದು ನಾಯಿಯನ್ನು ಹೊತ್ತೊಯ್ದಿತ್ತು. ಅಲ್ಲದೆ ಮಠದ ಆವರಣದಲ್ಲೂ ಓಡಾಡಿ ಆತಂಕ ಸೃಷ್ಟಿಸಿತ್ತು. ಬೆಟ್ಟದ ತಪ್ಪಲಿನಲ್ಲಿ ಗ್ರಾಮಸ್ಥರು ಪ್ರತಿನಿತ್ಯ ದನಕರುಗಳನ್ನು ಮೇಯಿಸುತ್ತಾರೆ. ಈ ಬಗ್ಗೆ ಗಮನ ಹರಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *