ಜನವರಿ 1ರಿಂದ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯು ಆರಂಭ: ಬಿಎಸ್‍ವೈ

– 6 ರಿಂದ 9ನೇ ತರಗತಿಯ ಮಕ್ಕಳಿಗೆ ವಿದ್ಯಾಗಮ

ಬೆಂಗಳೂರು: ತಜ್ಞರ ವರದಿ ಮೇರೆಗೆ ಜನವರಿ ಒಂದರಿಂದ ವಿದ್ಯಾಗಮ ಆರಂಭವಾಗಲಿದೆ. ಮೊದಲು ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯು ತರಗತಿಗಳು ಆರಂಭಗೊಳ್ಳಲಿವೆ. ತದನಂತರ 6 ರಿಂದ 9ನೇ ಕ್ಲಾಸ್ ಗಳ ವಿದ್ಯಾಗಮ ಆರಂಭಿಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸಿಎಂ ಜೊತೆಗಿನ ಸಭೆ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಮಿತಿ ವರದಿ ಕೊಟ್ಟಿತ್ತು. ನವೆಂಬರ್ ನಲ್ಲಿ ಡಿಸೆಂಬರ್ ವರೆಗೂ ಬೇಡ ಅಂತ ಸಮಿತಿ ಹೇಳಿತ್ತು. ಈಗ ಪ್ರಾರಂಭ ಮಾಡಿ ಅಂತ ಸಲಹೆ ಕೊಟ್ಟಿತ್ತು. ಸಿಎಂ ಸಹ ತಜ್ಞರ ವರದಿಗೆ ಸಮ್ಮತಿ ನೀಡಿದ್ದು, ಜನವರಿ 1 ರಿಂದ ಮೊದಲು 10-12 ನೇ ತರಗತಿ ಪ್ರಾರಂಭಕ್ಕೆ ಸಲಹೆ ಕೊಟ್ಟಿತ್ತು. ತರಗತಿ ಪ್ರಾರಂಭಕ್ಕೆ ಎಸ್‍ಒಪಿ ರೆಡಿ ಮಾಡಲಾಗಿದ್ದು, ಎಷ್ಟು ಸಮಯ ಪಾಠ ಮಾಡಬೇಕು ಅಂತ ಸಿದ್ದತೆ ಮಾಡಿದ್ದೇವೆ. ವಿದ್ಯಾಗಮ ಕೂಡಾ ಪ್ರಾರಂಭ ಮಾಡಲಾಗ್ತಿದೆ. 6 ರಿಂದ 9ನೇ ತರಗತಿಗೆ ವಿದ್ಯಾಗಮ ಪ್ರಾರಂಭ ಆಗಲಿದೆ ಎಂದು ತಿಳಿಸಿದರು.

ಶಾಲಾ ಆವರಣದಲ್ಲಿ ವಿದ್ಯಾಗಮ ನಡೆಯಲಿದ್ದು, ವಾರಕ್ಕೆ 3 ದಿನ ಒಂದು ವಿದ್ಯಾರ್ಥಿ ಶಾಲೆಗೆ ಬರೋ ರೀತಿ ಸಿದ್ಧತೆ ಮಾಡಲಾಗಿದೆ. ವಿದ್ಯಾಗಮಕ್ಕೆ ಬರೋ ಮಕ್ಕಳು ಪೋಷಕರ ಒಪ್ಪಿಗೆ ಪತ್ರ ತರಬೇಕು. ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ಸರ್ಕಾರ ಶಾಲೆಗಳಿಗೆ ಸ್ಯಾನಿಟೈಸ್ ಜವಾಬ್ದಾರಿ ನೀಡಲಾಗಿದೆ. ಖಾಸಗಿ ಶಾಲೆಗಳು ಆರರಿಂದ ಒಂಬತ್ತನೇ ತರಗತಿಯವರೆಗಿನ ಮಕ್ಕಳಿಗೆ ವಿದ್ಯಾಗಮ ಮಾಡಬಹುದು. ಹಾಸ್ಟೆಲ್ ಗಳು, ವಸತಿ ಶಾಲೆಗಳು ಕೂಡಾ ಪ್ರಾರಂಭ ಆಗಲಿದ್ದು, ಇಲ್ಲಿಗೆ ಬರುವ ಮಕ್ಕಳು ಮತ್ತು ಶಿಕ್ಷಕರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು.

ವಿದ್ಯಾರ್ಥಿಗಳು ಶಾಲೆಗೆ ಬರೋದು ಕಡ್ಡಾಯ ಅಲ್ಲ. ಆನ್ ಲೈನ್ ಮೂಲಕ ಪಾಠ ಕಲಿಯಬಹುದು. ಭಾನುವಾರ ಯಾವುದೇ ವಿಶೇಷ ಕ್ಲಾಸ್ ಗಳು ನಡೆಯಲ್ಲ. ಮುಂದಿನ ದಿನಗಳಲ್ಲಿ ಪಠ್ಯಕ್ರಮದ ಬಗ್ಗೆ ತೀರ್ಮಾನ ಮಾಡಲಾಗುವುದು. 15 ದಿನ ಪರಿಸ್ಥಿತಿ ನೋಡಿ ಪ್ರಥಮ ಪಿಯು ಪ್ರಾರಂಭದ ಬಗ್ಗೆ ನಿರ್ಧಾರ ಮಾಡಲಾಗುವುದು. ಶಾಲೆ ಆರಂಭವಾದ್ರೂ ಚಂದನ ವಾಹಿನಿಯಲ್ಲಿ ಆನ್‍ಲೈನ್ ಕ್ಲಾಸ್ ಮುಂದುವರಿಯಲಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

 

 

 

Comments

Leave a Reply

Your email address will not be published. Required fields are marked *