ಛತ್ತೀಸ್‍ಗಢದಲ್ಲಿ ಜೂನ್ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ- ಮನೆಯಲ್ಲಿಯೇ ಎಕ್ಸಾಂ

– 5 ದಿನಗಳೊಳಗಾಗಿ ಉತ್ತರ ಪತ್ರಿಕೆ ಹಿಂದಿರುಗಿಸಬೇಕು

ರಾಯ್‍ಪುರ: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಜೂನ್ 1ರಿಂದ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದ್ದು, ‘ಎಕ್ಸಾಂ ಫ್ರಮ್ ಹೋಂ’ ಎಂಬ ಹೊಸ ಮಾದರಿಯಲ್ಲಿ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ.

 

ಕೊರೊನಾ ನಡುವೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಲು ಈಗಾಗಲೇ ತಯಾರಿಯನ್ನು ನಡೆಸಲಾಗಿದ್ದು, ಜೂನ್ 1ರಿಂದ 5 ರವರೆಗೆ ವಿದ್ಯಾರ್ಥಿಗಳು ಆಯಾ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪ್ರಶ್ನೆ ಪತ್ರಿಕೆ ಮತ್ತು ಖಾಲಿ ಉತ್ತರ ಪತ್ರಿಕೆಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬಳಿಕ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿದ್ದು, ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಪಡೆದುಕೊಂಡ ಐದು ದಿನಗಳ ಒಳಗಾಗಿ ಪರೀಕ್ಷೆ ಬರೆದು ಆಯಾ ಪರೀಕ್ಷಾ ಕೇಂದ್ರಗಳಿಗೆ ಹಿಂದಿರುಗಿಸಿ ಕೊಡುವಂತೆ ಸೂಚನೆ ಹೊರಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಛತ್ತೀಸ್‍ಗಢದಲ್ಲಿ ಒಟ್ಟು 2.86 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಈಗಾಗಲೇ ಜೂನ್ 1ರ ಬಳಿಕ ಪರೀಕ್ಷೆ ನಡೆಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಛತ್ತೀಸ್‍ಗಢದ ಸಿಬಿಎಸ್‍ಇ ಕಾರ್ಯದರ್ಶಿ ವಿ.ಕೆ ಗೋಯಲ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಪಡೆದುಕೊಂಡ ನಂತರ ಕಡ್ಡಾಯವಾಗಿ ಉತ್ತರ ಪತ್ರಿಕೆಯೊಂದಿಗೆ ಪಡೆದುಕೊಂಡ 5 ದಿನಗಳ ಒಳಗಾಗಿ ಪರೀಕ್ಷಾ ಕೇಂದ್ರಗಳಿಗೆ ಹಿಂದಿರುಗಿಸಬೇಕು. ಇದೀಗ ಒಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಜೂನ್ 1 ರಂದು ಪ್ರಶ್ನೆ ಪತ್ರಿಕೆಯನ್ನು ಪಡೆದುಕೊಂಡರೆ ಜೂನ್ 6 ಒಳಗಾಗಿ ಹಿಂದಿರುಗಿಸಬೇಕು ಇಲ್ಲವಾದವಲ್ಲಿ ಅಂತವರ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಛತ್ತೀಸ್‍ಗಢದಲ್ಲಿ ಈಗಾಗಲೇ ಕೊರೊನಾದಿಂದಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ.

Comments

Leave a Reply

Your email address will not be published. Required fields are marked *