ಚೆನ್ನೈ ಜೊತೆ ಮೊದಲ ಪಂದ್ಯ, ಮೂರನೇ ದಿನ ಬೆಂಗಳೂರು ಮ್ಯಾಚ್

– ಕೊನೆಗೂ ಪ್ರಕಟವಾಯ್ತು ಐಪಿಎಲ್ ವೇಳಾಪಟ್ಟಿ

ಅಬುಧಾಬಿ: ಕ್ರೀಡಾ ಪ್ರೇಮಿಗಳು ನಿರೀಕ್ಷೆ ಮಾಡುತ್ತಿದ್ದ ಐಪಿಎಲ್-2020ರ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಸೆಪ್ಟಂಬರ್ 19ರಿಂದ ಪಂದ್ಯಗಳು ಆರಂಭವಾಗಲಿವೆ.

ಮೊದಲ ಪಂದ್ಯವನ್ನು ಸಂಪ್ರಾದಯದಂತೆ ಕಳೆದ ಟೂರ್ನಿಯಲ್ಲಿ ಫೈನಲ್ ಆಡಿದ್ದ ಮುಂಬೈ ಇಂಡಿಯನ್ಸ್ ತಂಡ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಆಡಲಿವೆ. ನಂತರ ಎರಡನೇ ಪಂದ್ಯದಲ್ಲಿ ಡೆಲ್ಲಿ ಮತ್ತು ಪಂಜಾಬ್ ತಂಡಗಳು ಮುಖಾಮುಖಿಯಾಗಲಿದ್ದು, ಮೂರನೇ ಪಂದ್ಯ ಆರ್‌ಸಿಬಿ ಮತ್ತು ಹೈದರಾಬಾದ್ ತಂಡಗಳ ನಡುವೆ ನಡೆಯಲಿದೆ.

ಈ ಮೊದಲು ಆಟಗಾರರಲ್ಲಿ ಮತ್ತು ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲ ಪಂದ್ಯವನ್ನು ಚೆನ್ನೈ ಆಡುವುದು ಅನುಮಾನ ಎಂದು ವರದಿಯಾಗಿತ್ತು. ಆದರೆ ಈಗ ಈ ಅನುಮಾನಕ್ಕೆ ವೇಳಾಪಟ್ಟಿ ಉತ್ತರ ನೀಡಿದೆ.

ಟೂರ್ನಿಯಲ್ಲಿ ನವೆಂಬರ್ ಮೂರರವರೆಗೆ ಒಟ್ಟು 56 ಪಂದ್ಯಗಳು ನಡೆಯಲಿದ್ದು, 45ದಿನಗಳ ಕಾಲ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ವಾರದ ದಿನದಲ್ಲಿ ಎಂದಿನಂತೆ ಕೇವಲ ಒಂದೇ ಪಂದ್ಯ ನಡೆಯುತ್ತದೆ. ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿದೆ. ಇನ್ನೂ ಶನಿವಾರ ಮತ್ತು ಭಾನುವಾರ ಎರಡು ಪಂದ್ಯಗಳಿದ್ದು, ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಎರಡನೇ ಪಂದ್ಯ 7.30ಕ್ಕೆ ಆರಂಭವಾಗಲಿದೆ.

ದುಬೈ, ಶಾರ್ಜಾ ಮತ್ತು ಅಬುಧಾಬಿ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಅಬುಧಾಬಿ ಸ್ಟೇಡಿಯಂನಲ್ಲಿ ನಡೆಯಲಿದೆ. ಕೊನೆಯ ಲೀಗ್ ಪಂದ್ಯ ಶಾರ್ಜಾ ಮೈದಾನದಲ್ಲಿ ನಡೆಯಲಿದೆ. ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಸಿಸಿಐ ಬಿಡುಗಡೆ ಮಾಡಿದ್ದು, ನಂತರ ನಡೆಯುವ ಕ್ವಾಲಿಫಯರ್, ಫೈನಲ್ ಪಂದ್ಯದ ಸ್ಥಳಗಳ ಮಾಹಿತಿಯನ್ನು ಪ್ರಕಟಿಸಿಲ್ಲ.

ಇಂದು ಬಿಡುಗಡೆ ಮಾಡಿರುವ ಐಪಿಎಲ್ ವೇಳಾಪಟ್ಟಿಯನ್ನು ಬಿಸಿಸಿಐ ಕಳೆದ ತಿಂಗಳಲ್ಲೇ ಬಿಡುಗಡೆ ಮಾಡಬೇಕಾಗಿತ್ತು. ಇದರ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರಿಗೆ ಮತ್ತು ಸಿಬ್ಬಂದಿ ವರ್ಗದವರಗೆ ಕೊರೊನಾ ಪಾಸಿಟಿವ್ ಬಂದಿತ್ತು ಹೀಗಾಗಿ ತಡವಾಗಿತ್ತು. ನಂತರ ಕಳೆದ ಶುಕ್ರವಾರ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಅಂದು ಕೂಡ ಆಗಿರಲಿಲ್ಲ.

ಕಳೆದ ಮಾರ್ಚ್ ತಿಂಗಳಿನಲ್ಲೇ ನಡೆಯಬೇಕಿದ್ದ ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿತ್ತು. ಈ ನಡುವೆ ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಐಪಿಎಲ್ ಅನ್ನು ಯುಎಇಯಲ್ಲಿ ಆಡಿಸಲು ಬಿಸಿಸಿಐ ತೀರ್ಮಾನ ಮಾಡಿತ್ತು. ಅಂತಯೇ ಈಗಾಗಲೇ ಎಲ್ಲ ತಂಡಗಳು ಯುಎಇ ತಲುಪಿದ್ದಿ. ಸೆಪ್ಟೆಂಬರ್ 19ರಿಂದ ಐಪಿಎಲ್ ಹಂಗಾಮ ಆರಂಭವಾಗಲಿದೆ.

Comments

Leave a Reply

Your email address will not be published. Required fields are marked *