ಚುನಾವಣೆಯಿಂದ ಸೋಂಕು ಹೆಚ್ಚಾಗಿದೆ ಎಂಬುದು ಸುಳ್ಳು, ಜನರೇ ಕೊರೊನಾ ಜೊತೆ ಹೋರಾಡಬೇಕು: ಶೆಟ್ಟರ್

ಬಳ್ಳಾರಿ: ಉಪ ಚುನಾವಣೆಯಿಂದ ಕೊರೊನಾ ಸೋಂಕು ಹೆಚ್ಚಳವಾಗಿದೆ ಎಂಬುದು ಸುಳ್ಳು, ಜನರೇ ಕೊರೊನಾ ವಿರುದ್ಧ ಹೋರಾಡಬೇಕು ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಮತ್ತು ರಾಜ್ಯದ ಉಪ ಚುನಾವಣೆಗಳಿಂದ ಕೊರೊನಾ ಹೆಚ್ಚಳ ಆಗಿದೆ ಎಂಬುದು ಸುಳ್ಳು. ಕೊರೊನಾ ಹೆಚ್ವಳಕ್ಕೆ ನೂರಾರು ಕಾರಣ ಇವೆ. ಜನರೇ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಆಕ್ಸಿಜನ್ ಹಂಚಿಕೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಿಎಂ ನನಗೆ ನೀಡಿದ್ದಾರೆ. ರಾಜ್ಯಕ್ಕೆ ದಿನಕ್ಕೆ 1,750 ಟನ್ ಆಕ್ಸಿಜನ್ ಅಗತ್ಯವಿದೆ. ಸದ್ಯ ನಮ್ಮಲ್ಲಿ 1,200ಕ್ಕೂ ಹೆಚ್ಚು ಟನ್ ಆಕ್ಸಿಜನ್ ಲಭ್ಯ ಇದೆ. ಹೆಚ್ವಳ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಂದಾಲ್ ಕಂಪನಿಯವರ ಜೊತೆ ಸಭೆ ಮಾಡಲಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಆಕ್ಸಿಜನ್ ಜಿಂದಾಲ್ ನಲ್ಲಿ ಉತ್ಪಾದನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸ್ಟೀಲ್ ಉತ್ಪಾದನೆಗೆ ಆಕ್ಸಿಜನ್ ಬಳಕೆ ಕಡಿಮೆ ಮಾಡಿ, ವೈದ್ಯಕೀಯ ಸೇವೆಗೆ ನೀಡುವಂತೆ ಮನವಿ ಮಾಡಲಾಗಿದೆ. ಜಿಂದಾಲ್ ನವರು ಸಹ ನಮ್ಮ ಮನವಿಗೆ ಸ್ಪಂದನೆ ನೀಡಿದ್ದಾರೆ. ಹೊರ ರಾಜ್ಯ ದಿಂದಲೂ ಬೇಡಿಕೆ ಹೆಚ್ಚಿದೆ. ರಾಜ್ಯದಲ್ಲಿಯೂ ಆಕ್ಸಿಜನ್ ಬೇಡಿಕೆ ದಿನೇ ದಿನೇ ಏರಿಕೆ ಆಗುತ್ತಿದೆ. ನಿರೀಕ್ಷೆ ಮೀರಿ ಸೋಂಕು ಹರಡುತ್ತಿದೆ. ಹೀಗಾಗಿ ಕೊಪ್ಪಳ, ಬೆಂಗಳೂರು, ಭದ್ರಾವತಿಯಲ್ಲಿ ಸ್ಥಗಿತಗೊಂಡ ಕಾರ್ಖಾನೆಯಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *