ಚಿನ್ನಕ್ಕಾಗಿ ಅನ್ನ ನೀಡಿದ ಒಡೆಯನನ್ನು ಕೊಂದ ಪಾಪಿ ಕೆಲಸಗಾರ ಅರೆಸ್ಟ್

– ಕೊಲೆಯಾದ 4 ಗಂಟೆಯಲ್ಲೇ ಆರೋಪಿ ಬಂಧನ

ಯಾದಗಿರಿ: ಚಿನ್ನಕ್ಕಾಗಿ ಉದ್ಯಮಿ ಮಗನನ್ನ ಹತ್ಯೆ ಮಾಡಿದ ಪಾಪಿಗಳನ್ನು ಕೊನೆಗೂ ಬಂಧಿಸಲಾಗಿದೆ. ಕೊಲೆ ನಡೆದ ನಾಲ್ಕೇ ಗಂಟೆಯಲ್ಲಿ ಆರೋಪಿಗಳನ್ನು ಹುಣಸಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಜನವರಿ 13 ರಂದು ಯಾದಗಿರಿ ಜಿಲ್ಲೆ ಹುಣಸಗಿ ಪಟ್ಟಣದ ರಾಜಸ್ಥಾನ ಮೂಲದ ಚಿನ್ನದ ವ್ಯಾಪಾರಿ ಜಗದೀಶ್ ಎಂಬವರ ಪುತ್ರ ನರೇಂದ್ರ(22)ನನ್ನು ಆತನ ಕೋಣೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ನರೇಂದ್ರನ ಜೊತೆಗಿದ್ದ ಕಿಶೋರ್ ಎಂಬಾತ ಈ ಕೊಲೆಯ ಸೂತ್ರಧಾರಿ. ಮಹಾರಾಷ್ಟ್ರ ಮೂಲದ ಅಜಿತ್ ಎಂಬಾತನ ಸಹಾಯದಿಂದ ತನ್ನ ಯಜಮಾನನ್ನೇ ಹತ್ಯೆ ಮಾಡಿದ್ದ ಕಿಶೋರ್, ರೂಮ್ ನಲ್ಲಿದ್ದ 1 ಕೆಜಿ 570 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಮತ್ತು ಒಂದು ಬೈಕ್ ಸೇರಿದಂತೆ ಒಟ್ಟು 1 ಕೋಟಿ ಮೌಲ್ಯದ ಚಿನ್ನಾಭರಣ ಕದ್ದು ಪಾರಾರಿಯಾಗಿದ್ದ. ಅಲ್ಲದೆ ನರೇಂದ್ರನನ್ನು ಕೊಲೆ ಮಾಡಿದ್ದ ದುಷ್ಕರ್ಮಿಗಳು ಕಿಶೋರ್ ನನ್ನು ಸಹ ಅಪಹರಿಸಿದ್ದಾರೆಂಬಂತೆ ಬಿಂಬಿಸಿದ್ದ. ಹಾಡಹಗಲೇ ನಡೆದಿದ್ದ ಈ ಕೊಲೆ ಇಡೀ ಯಾದಗಿರಿ ಜನರನ್ನು ತಲ್ಲಣಗೊಳಿಸಿತ್ತು.

ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಯಾದಗಿರಿ ಪೊಲೀಸರು ಸುರಪುರ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ, ಸಿಪಿಐ ದೌಲತ್ ಮತ್ತು ಪಿಎಸ್‍ಐ ಬಾಪುಗೌಡ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದರು. ಕೊಲೆಯಾದ 4 ಗಂಟೆಯಲ್ಲಿ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸರು, ಬಂಧಿತರಿಂದ 1 ಕೆಜಿ 570 ಗ್ರಾಂ. ಚಿನ್ನ, 2 ಕೆಜಿ ಬೆಳ್ಳಿ ಮತ್ತು ಒಂದು ಬೈಕ್ ಸೇರಿದಂತೆ ಒಟ್ಟು 1 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *