ಚಿಕ್ಕಮಗಳೂರಿನ ಒಂದೇ ಗ್ರಾಮದ 128 ಜನರಿಗೆ ಕೊರೊನಾ

ಚಿಕ್ಕಮಗಳೂರು: ಒಂದೇ ಗ್ರಾಮದ 128 ಜನರಿಗೆ ಕೊರೊನಾ ಪಾಸಿಟಿವ್ ಬಂದ ಘಟನೆ ಚಿಕ್ಕಮಗಳೂರು ತಾಲೂಕಿನ ಇಂದಿರಾನಗರ (ಎನ್.ಎಂ.ಡಿ.ಸಿ.) ಗ್ರಾಮದಲ್ಲಿ ನಡೆದಿದೆ.

ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಇಂದಿರಾನಗರ ಗ್ರಾಮದ 60 ಸಂಜೀವ ಎಂಬುವರು ಮೇ 12ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಮೇ 14 ರಂದು ಸಾವನ್ನಪ್ಪಿದ್ದರು. ಆಸ್ಪತ್ರೆಯವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಮೃತದೇಹವನ್ನು ಹಸ್ತಾಂತರಿಸಿದ್ದಾರೆ.

ನಾನ್ ಕೋವಿಡ್ ಡೆತ್ ಎಂದು ಮೃತನ ಅಂತ್ಯಕ್ರಿಯೆಯಲ್ಲಿ ಊರಿನ ಹಲವು ಜನ ಪಾಲ್ಗೊಂಡಿದ್ದರು. ಮೃತ ಸಂಜೀವ್ ಮರಣದ ನಂತರ ಅವರ ಅಂತ್ಯಸಂಸ್ಕಾರ ಮಾಡಿ ಜನ ಮನೆಗೆ ಬರುತ್ತಿದ್ದಂತೆ ಮೃತನ ಕೋವಿಡ್ ಟೆಸ್ಟ್ ವರದಿ ಪಾಸಿಟಿವ್ ಬಂದಿದ್ದು ಊರಿನ ಜನಕ್ಕೆ ಬರಸಿಡಿಲು ಬಡಿದಂತಾಗಿತ್ತು. ವರದಿ ನೋಡಿ ಜನ ಕೂಡ ಕಂಗಾಲಾಗಿದ್ದರು. ಮರು ದಿನ ಗ್ರಾಮದ ಸುಮಾರು 220ಕ್ಕೂ ಅಧಿಕ ಜನ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಈ ವರದಿ ಬಂದಿದ್ದು, 128 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಇಡೀ ಗ್ರಾಮವನ್ನೇ ಸೀಲ್‍ಡೌನ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಇದೇ ಗ್ರಾಮದ ಮತ್ತೆ ಹಲವರ ವರದಿಯೂ ಬರಬೇಕಿದೆ. ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಇದೇ ಗ್ರಾಮದ ಅಕ್ಕಪಕ್ಕದಲ್ಲಿ ಹತ್ತಾರು ಹೋಂ ಸ್ಟೇ ಹಾಗೂ ರೆಸಾರ್ಟ್‍ಗಳಿವೆ. ಅಲ್ಲಿಗೆ ಹಲವರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅವರಿಂದಲೂ ಸೋಂಕು ಬಂದಿರಬಹುದು ಎಂದು ಹಳ್ಳಿಯ ಜನ ಅಂದಾಜಿಸಿದ್ದಾರೆ.

ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಯಾರೂ ಮನೆಯಿಂದ ಹೊರಬಾರದಂತೆ ಸೂಚನೆ ನೀಡಿದ್ದಾರೆ. ಗ್ರಾಮದಲ್ಲಿ ಈಗಾಗಲೇ ಪಡಿತರ ಹಂಚಲಾಗಿದೆ. ಜನ ಮತ್ತಷ್ಟು ಸೌಲಭ್ಯಗಳಿಗೆ ಬೇಡಿಕೆ ಇಟ್ಟಿದ್ದಾರೆ. ತಾಲೂಕು ಆಡಳಿತ ಎಲ್ಲಾ ಸೌಲಭ್ಯ ಕಲ್ಪಿಸುತ್ತೇವೆ. ಯಾರೂ ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿದೆ.

Comments

Leave a Reply

Your email address will not be published. Required fields are marked *