ಚಿಕ್ಕಬಳ್ಳಾಪುರ ಎಸ್‍ಪಿ, ಡಿಸಿಗೆ ಡಿಕೆಶಿ ಖಡಕ್ ವಾರ್ನಿಂಗ್

ಚಿಕ್ಕಬಳ್ಳಾಪುರ: ನಮ್ಮ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ- ನಾನು ಬಂದು ಧರಣಿ ಮಾಡುತ್ತೇವೆ. ನಿಮ್ಮ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಸ್‍ಪಿ ಹಾಗೂ ಜಿಲ್ಲಾಧಿಕಾರಿಗೆ ಎಚ್ಚರಿಸಿದರು.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಜನಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಇಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜನಧ್ವನಿ ಯಾತ್ರೆ ನಡೆಯಿತು. ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕಂದವಾರ ಕೆರೆಗೆ ಬಾಗಿನ ಅರ್ಪಿಸಿದರು. ನಂತರ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ರೋಡ್ ಶೋ ಹಾಗೂ ಕಾಲ್ನಿಡಿಗೆ ಮೂಲಕ ಶಿಡ್ಲಘಟ್ಟ ವೃತ್ತಕ್ಕೆ ಬಂದ ಕಾಂಗ್ರೆಸ್ ನಾಯಕರು ಶಿಡ್ಲಘಟ್ಟ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನನಗೆ ದೂರು ಕೊಟ್ಟಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರ ಕಿರುಕುಳ ಜಾಸ್ತಿ ಆಗಿದೆಯಂತೆ. ನಮ್ಮ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ಸಿದ್ದರಾಮಯ್ಯ- ನಾನು ಬಂದು ಧರಣಿ ಮಾಡುತ್ತೇವೆ. ನಿಮ್ಮ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ವಾರ್ನ್ ಮಾಡಿದರು. ಇದೇ ವೇಳೆ ನಿನ್ನೆ ಇದ್ದ ಮಂತ್ರಿ ಇಂದು ಇಲ್ಲ ಇವತ್ತು ಇರೋರು ನಾಳೆ ಇರಲ್ಲ. ಸರ್ಕಾರಗಳೇ ಉರುಳಿ ಹೋಗುತ್ತವೆ. ಸೂರ್ಯ ಹುಟ್ಟಿ ಮುಳುಗಿ ಹೋಗುತ್ತಾನೆ, ಹೀಗಾಗಿ ನಿಮ್ಮ ತಪ್ಪು ತಿದ್ದಿಕೊಳ್ಳಿ ಎಂದು ಡಿಕೆಶಿ ಎಚ್ಚರಿಸಿದರು.

ನಾಳೆ ವಿಧಾನಸಭೆ ಅಧಿವೇಶನ ಇದ್ದು, ಇಂದು ಯಾಕೆ ಜನಧ್ವನಿ ಯಾತ್ರೆ ಆರಂಭ ಮಾಡಬೇಕಿತ್ತು ಎಂದು ಹಲವರು ಕೇಳುತ್ತಿದ್ದಾರೆ. ಈ ದಿನ ಬುದ್ಧ, ಬಸವಣ್ಣನವರು ಮನೆ ಬಿಟ್ಟ ಗಳಿಗೆ. ಏಸು ಕ್ರಿಸ್ತ ಶಿಲುಬೆಗೆ ಏರಿದ, ಭೀಮಾಭಾಯಿಯವರು ಅಂಬೇಡ್ಕರ್ ಗೆ ಜನ್ಮ ಕೊಟ್ಟ, ಗಾಂಧೀಜಿ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡ, ಸೋನಿಯಾ ಗಾಂಧಿಯವರು ದೇಶದ ಅರ್ಥಿಕತೆಗಾಗಿ ಪ್ರಧಾನಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದಂತಹ ಗಳಿಗೆಯಲ್ಲಿ ನಾವೆಲ್ಲ ಸೇರಿದ್ದೇವೆ. ಈ ಪವಿತ್ರ ಗಳಿಗೆಯಲ್ಲಿ ಜನಧ್ವನಿ ಯಾತ್ರೆ ಆರಂಭ ಮಾಡಿದ್ದೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *