ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆ- ಬಿದ್ದವು ಬೃಹತ್ ಗಾತ್ರದ ಆಲಿಕಲ್ಲು

– ಹತ್ತಾರು ಪಾಲಿ ಹೌಸ್, ಬೆಳೆಗಳು ಸಂಪೂರ್ಣ ನಾಶ

ಚಿಕ್ಕಬಳ್ಳಾಪುರ: ಜಿಲ್ಲಾ ಭಾರೀ ಮಳೆ ಸುರಿದಿದ್ದು, ಇದರ ಜೊತೆಗೆ ಬೃಹತ್ ಗಾತ್ರದ ಆಲಿಕಲ್ಲುಗಳು ಸಹ ಬಿದ್ದಿವೆ. ಇದರಿಂದಾಗಿ ಪಾಲಿ ಹೌಸ್ ಹಾಗೂ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಆಲಿಕಲ್ಲು ಮಳೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಗ್ರಾಮದ ಬಳಿ ನಡೆದಿದೆ. ಬಶೆಟ್ಟಿಹಳ್ಳಿ ಗ್ರಾಮ ಹಾಗೂ ಗೌಡಗೆರೆ ಗ್ರಾಮ ವ್ಯಾಪ್ತಿಯಲ್ಲಿ ಬಿದ್ದ ಆಲಿಕಲ್ಲು ಮಳೆಗೆ ಹತ್ತಾರು ಪಾಲಿ ಹೌಸ್ ಗಳು, ತರಕಾರಿ ಬೆಳೆಗಳು, ದ್ರಾಕ್ಷಿ ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ. ಒಂದೊಂದು ಆಲಿಕಲ್ಲು ಸುಮಾರು 10 ರಿಂದ 20 ಕೆಜಿ ತೂಕದ್ದಾಗಿವೆ.

ಇಷ್ಟು ದೊಡ್ಡ ಗಾತ್ರದ ಆಲಿಕಲ್ಲು ಕಂಡು ರೈತರು ನಿಬ್ಬೆರಗಾಗಿದ್ದಾರೆ. ರೈತ ರಘು ಅವರಿಗೆ ಸೇರಿದ ತೋಟದ ಮನೆಯ ಶೀಟುಗಳು ಗಾಳಿಗೆ ಕಿತ್ತು ಹೋಗಿವೆ. ಪಾಲಿ ಹೌಸ್ ಸೇರಿದಂತೆ ಹಾಗಲಕಾಯಿ, ನರ್ಸರಿ ಸಂಪೂರ್ಣ ಹಾಳಾಗಿದ್ದು, ಸುಮಾರು 10 ರಿಂದ 15 ಲಕ್ಷ ರೂ. ನಷ್ಟ ಆಗಿದೆ. ರೈತರು ಕಣ್ಣೀರಿಡುವಂತಾಗಿದೆ, ಸುತ್ತ ಮುತ್ತಲ ರೈತರ ಬಹುತೇಕ ಪಾಲಿಹೌಸ್ ಗಳು ಹರಿದು ಹಾಳಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಮತ್ತೊಂದೆಡೆ ಚಿಂತಾಮಣಿ ತಾಲೂಕಿನ ಸೋಮಯಾಜಲಹಳ್ಳಿಯಲ್ಲಿ ಸಿಡಿಲು ಬಡಿದು ಮನೆ ಕುಸಿದಿದ್ದು, 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Comments

Leave a Reply

Your email address will not be published. Required fields are marked *