ಚಿಕಿತ್ಸೆ ನೀಡುವ ಆಸ್ಪತ್ರೆಗಳಿಂದ್ಲೇ ಕೊರೊನಾ- ಸೋಂಕಿತರ ಜೊತೆ ಶಂಕಿತರು ಮಿಕ್ಸ್!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸ್ಫೋಟವಾಗಲು ಕಾರಣವಾಗುವ ಮೂರು ಎಕ್ಸ್ ಕ್ಲೂಸೀವ್ ವಿಡಿಯೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,272ಕ್ಕೆ ಏರಿಕೆಯಾಗಿದ್ದು, ಈ ಮೂರು ದೃಶ್ಯ ನೋಡಿದ ಬಳಿಕ ಇಲ್ಲಿ ಈ ಸಂಖ್ಯೆ 12 ಸಾವಿರ ಆದರೂ ಅಚ್ಚರಿ ಇಲ್ಲ. ಚಿಕಿತ್ಸೆ ನಿಡುವ ಆಸ್ಪತ್ರೆಗಳೇ ಕೊರೊನಾ ಫ್ಯಾಕ್ಟರಿ ಆಗ್ತಿದ್ಯಾ ಅನ್ನೋ ಅನುಮಾನ ಕೂಡ ಮೂಡುತ್ತಿದೆ. ಸೋಂಕು ಹಾಗೂ ಶಂಕಿತರು ದಾಖಲಾದರೆ ಇಲ್ಲಿ ಕೊರೊನಾ ಫ್ರೀ ಎನ್ನುವಂತಾಗಿದೆ. ಅಪ್ಪಿತಪ್ಪಿ ರಾಜಾಜಿನಗರದ ಇಎಸ್‍ಐ ಆಸ್ಪತ್ರೆ ಸೇರಿದ್ರೆ ನಿಮಗೂ ಸೋಂಕು ತಗುಲಬಹುದು.

ಆಸ್ಪತ್ರೆಯ 3 ಸ್ಪೋಟಕ ದೃಶ್ಯಾವಳಿಯಲ್ಲಿ ಏನಿದೆ?
ದೃಶ್ಯ 1- ಸೋಂಕಿತರ ಜೊತೆ ಶಂಕಿತರು ಮಿಕ್ಸ್!
ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯಲ್ಲಿ ಕೊರೊನಾಗೆ ಅಂತ ಸದ್ಯ ಒಂದು ಬ್ಲಾಕ್ ನಿಗದಿ ಮಾಡಲಾಗಿದೆ. ವಿಪರ್ಯಾಸ ಅಂದರೆ ಕೊರೊನಾ ಪಾಸಿಟಿವ್ ಸೋಂಕಿತರನ್ನು ಹಾಗೂ ಕೊರೊನಾ ಸೋಂಕು ಶಂಕಿತರನ್ನು ಒಂದೇ ವಾರ್ಡಿನಲ್ಲಿ ಇರಿಸಲಾಗಿದೆ. ಕನಿಷ್ಟ ಪಕ್ಷ ಒಂದು ಪರದೆ ಕೂಡ ಅಡ್ಡ ಹಾಕಿಲ್ಲ. ಒಂದು ದೊಡ್ಡ ಹಾಲ್‍ನಲ್ಲಿ ಸೋಂಕಿತರು, ಸೋಂಕು ಶಂಕಿತರನ್ನು ಇರಿಸಲಾಗಿದೆ.

ದೃಶ್ಯ 2- ಮಹಿಳೆಯರಿಗೆ ಇಲ್ವೇ ಇಲ್ಲ ಪ್ರತ್ಯೇಕ ವಾರ್ಡ್!
ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯ ಮತ್ತೊಂದು ಎಡವಟ್ಟು ಎಂದರೆ, ಈ ಆಸ್ಪತ್ರೆಯ ಕೊರೋನಾ ವಾರ್ಡಿನಲ್ಲಿ ಪುರುಷರ ಜೊತೆ ಮಹಿಳೆಯರನ್ನು ಇರಿಸಲಾಗಿದೆ. ಕೊರೊನಾ ರೂಲ್ಸ್ ಪ್ರಕಾರ, ಮಹಿಳೆಯರನ್ನು ಪ್ರತ್ಯೇಕ ವಾರ್ಡಿನಲ್ಲಿ ಇರಬೇಕು. ಆದರೆ ಇದು ಪಾಲನೆ ಆಗ್ತಾನೆ ಇಲ್ಲ. ಸೋಂಕಿತರು, ಸೋಂಕು ಶಂಕಿತರ ಜೊತೆ ಮಹಿಳಾ ರೋಗಿಗಳನ್ನು ಇರಿಸಲಾಗಿದೆ.

ದೃಶ್ಯ 3 – ಸೋಂಕಿತರಿಗೂ, ಶಂಕಿತರಿಗೂ ಕಾಮನ್ ಟಾಯ್ಲೆಟ್
ರಾಜಾಜಿನಗರದ ಇಎಸ್‍ಐ ಆಸ್ಪತ್ರೆಲಿರುವ ಕೊರೊನಾ ವಾರ್ಡಿನಲ್ಲಿ ಒಂದು ಪ್ರತ್ಯೇಕ ಟಾಯ್ಲೆಟ್ ವ್ಯವಸ್ಥೆ ಇಲ್ಲ. ಕೊರೊನಾ ಸೋಂಕಿತರಿಗೂ, ಕೊರೊನಾ ಸೋಂಕು ಶಂಕಿತರಿಗೂ ಇರೋದು ಒಂದೇ ಒಂದು ಶೌಚಾಲಯ. ಅಷ್ಟೇ ಅಲ್ಲ ಇಲ್ಲಿ ಕರ್ತವ್ಯ ನಿರ್ವಹಿಸುವ ಕೊರೊನಾ ವಾರಿಯರ್ಸ್ ವೈದ್ಯಕೀಯ ಸಿಬ್ಬಂದಿ ಕೂಡ ಇದೇ ಟಾಯ್ಲೆಟ್ ಬಳಸಬೇಕಾದ ಅನಿವಾರ್ಯತೆ.

ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು, ಕಾರ್ಮಿಕ ಸಚಿವರು ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಇದು ನಿಮ್ಮ ಕ್ಷೇತ್ರದಲ್ಲಿ ಬರುವ ಆಸ್ಪತ್ರೆಯಾಗಿದ್ದು, ಈ ಆಸ್ಪತ್ರೆಯ ವಾರ್ಡ್ ಅವ್ಯವಸ್ಥೆ ನೋಡಿದರೆ ಸರ್ಕಾರವೇ ಸೋಂಕು ಸ್ಫೋಟಕ್ಕೆ ಕಾರಣ ಆಗ್ತಿದೆ ಅಂತ ನಿಮಗೆ ಅನ್ನಿಸಲ್ವಾ..?. ಈ ಹಿನ್ನೆಲೆಯಲ್ಲಿ ಕೂಡಲೇ ರಾಜಾಜಿನಗರ ಇಎಸ್‍ಐ ಆಸ್ಪತ್ರೆಗೆ ದೌಡಾಯಿಸಿ, ಕೊರೊನಾ ವಾರ್ಡಿನ ಅವ್ಯವಸ್ಥೆ ಸರಿ ಮಾಡಿ. ಇಲ್ಲ ಅಂದ್ರೆ ಕೊರೋನಾ ಮತ್ತಷ್ಟು ಸ್ಫೋಟ ಆಗುವುದರಲ್ಲಿ ಎರಡು ಮಾತಿಲ್ಲ.

Comments

Leave a Reply

Your email address will not be published. Required fields are marked *