ಚಾಮರಾಜನಗರ: ವೀಕೆಂಡ್, ರಜಾದಿನ ಬಂದರೆ ಸಾಕು ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಆದರೆ ಇದೀಗ ಪ್ರವಾಸಕ್ಕೆ ಬಂದವರಿಗೆ ಪ್ರವಾಸಿ ಸ್ಥಳದಲ್ಲೇ ಕೋವಿಡ್ ಟೆಸ್ಟ್ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಹೆಚ್ಚು ಕೋವಿಡ್ ಟೆಸ್ಟ್ ಮಾಡಿ, ಸೋಂಕಿತರ ಪತ್ತೆ ಹಚ್ಚುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಅಲ್ಲದೇ ಲಾಕ್ಡೌನ್ ಸಡಿಲಿಕೆಯಿಂದ ಪ್ರವಾಸಿಗರ ಸ್ವರ್ಗದಂತಿರುವ ಜಿಲ್ಲೆಯ ಪ್ರವಾಸಿತಾಣಗಳಿಗೆ ಪ್ರವಾಸಿಗರು ದಂಡೆ ಹರಿದು ಬರುತ್ತಿದೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಬಿಆರ್ ಟಿ, ಮಲೆ ಮಹದೇಶ್ವರ ಬೆಟ್ಟ, ಮಲೆಹದೇಶ್ವರ ವನ್ಯಧಾಮ, ಭರಚುಕ್ಕಿ ಸೇರಿದಂತೆ ಹಲವು ಪ್ರವಾಸಿ ತಾಣಗಳ ವೀಕ್ಷಣೆಗೆ ರಾಜ್ಯ, ಹೊರ ರಾಜ್ಯದಿಂದಲು ಸಾಕಷ್ಟು ಜನರು ಬರುತ್ತಿದ್ದಾರೆ. ಅದರಲ್ಲಿಯೂ ವಾರಾಂತ್ಯದ ದಿನಗಳು ಹಾಗೂ ರಜೆ ದಿನಗಳಲ್ಲಿ ಪ್ರೇಕ್ಷಣೀಯ ಸ್ಥಳಗಳು ಕಿಕ್ಕಿರಿದು ತುಂಬಿರುತ್ತವೆ. ಇದರಿಂದ ಹೊಸ ಚಿಂತನೆ ಮಾಡಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಪ್ರವಾಸಿ ಸ್ಥಳಗಳಲ್ಲೇ ಕೋವಿಡ್ ಟೆಸ್ಟ್ ಮಾಡಲು ತೀರ್ಮಾನ ಮಾಡಿದೆ. ಈ ಕುರಿತು ಚಾಮರಾಜನಗರ ಡಿಎಚ್ಒ ಡಾ.ರವಿ ಅವರು ಮಾಹಿತಿ ನೀಡಿದ್ದಾರೆ.

ರ್ಯಾಪಿಡ್ ಮತ್ತು ಆರ್ ಟಿಪಿಸಿಆರ್ ಸ್ವಾಬ್ ಕಲೆಕ್ಷನ್ ಎರಡು ರೀತಿ ಕೋವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ. ರೋಗ ಲಕ್ಷಣವಿರುವ ಹಾಗೂ ವಯಸ್ಸಾಗಿರುವ ಪ್ರವಾಸಿಗರನ್ನು ರ್ಯಾಪಿಡ್ ಟೆಸ್ಟ್ ಗೆ ಒಳಪಡಿಸುತ್ತೇವೆ. ಬಳಿಕ ಆರ್ ಟಿಪಿಸಿಆರ್ ಟೆಸ್ಟ್ ಮಾಡುತ್ತೇವೆ. ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಿ ಎಂದು ನಾವು ಒತ್ತಾಯ ಮಾಡಲು ಕೂಡ ಸಾಧ್ಯವಿಲ್ಲ. ಆದರೆ ಎಲ್ಲರನ್ನು ಮನವೊಲಿಸಿ ಕೋವಿಡ್ ಟೆಸ್ಟ್ ಮಾಡಿಸಲು ಪ್ರಯತ್ನಿಸುತ್ತೇವೆ. ಅದು ಅವರ ಮತ್ತು ಅವರ ಸುತ್ತಲಿನವರ ಆರೋಗ್ಯ ದೃಷ್ಟಿಯಿಂದ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರಿಗೆ ಕೋವಿಡ್ ಟೆಸ್ಟ್ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿರುವುದು ಜನರ ಆರೋಗ್ಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ. ಪ್ರವಾಸಿಗರು ಎಷ್ಟರ ಮಟ್ಟಿಗೆ ಜಿಲ್ಲಾಡಳಿತದ ತೀರ್ಮಾನಕ್ಕೆ ಬೆಂಬಲ ನೀಡಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುತ್ತಾರೆ ಕಾದು ನೋಡಬೇಕಿದೆ.


Leave a Reply