ಚಾಮರಾಜನಗರ ಜೈಲಿನಲ್ಲಿ ಕೊರೊನಾ ಸ್ಫೋಟ- 16 ಖೈದಿಗಳಿಗೆ ಸೋಂಕು ದೃಢ

ಚಾಮರಾಜನಗರ: ಆರಂಭದಲ್ಲಿ ಹಸಿರುವಲಯದಲ್ಲಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಇದೀಗ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಜೈಲಿನಲ್ಲಿರುವ ಖೈದಿಗಳಲ್ಲಿಯೂ ಸೋಂಕು ಪತ್ತೆಯಾಗುತ್ತಿದ್ದು, ಜೈಲು ಸಿಬ್ಬಂದಿ ಹಾಗೂ ಇತರ ಖೈದಿಗಳು ಕಂಗಾಲಾಗಿದ್ದಾರೆ.

ಜಿಲ್ಲೆಯ ಹಳ್ಳಿಗಳಲ್ಲೂ ಕಾಣಿಸಿಕೊಂಡಿರುವ ಕೊರೊನಾ ಸೋಂಕಿನ ಬಿಸಿ ಚಾಮರಾಜನಗರದ ಜೈಲ್‍ಗೂ ತಟ್ಟಿದೆ. ಮೊದಲ ಹಂತದಲ್ಲಿ 58 ಮಂದಿ ವಿಚಾರಣಾಧೀನ ಖೈದಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ 16 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತ ಖೈದಿಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 100 ಮಂದಿ ಖೈದಿಗಳಿಗೆ ಇಂದು ಕೋವಿಡ್ ಟೆಸ್ಟ್ ನಡೆಸಲಾಗುತ್ತಿದ್ದು, ಮತ್ತಷ್ಟು ಮಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ.

ಜೈಲಿನ ಸಿಬ್ಬಂದಿ ಹಾಗೂ ಉಳಿದ ಕೈದಿಗಳಲ್ಲಿ ಇದೀಗ ಆತಂಕ ಶುರುವಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಆದೇಶವಾದ ಬಳಿಕ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಲಾಗುತ್ತಿದೆ. ನೆಗೆಟಿವ್ ಬಂದರೆ ಮಾತ್ರ ಜೈಲಿನೊಳಗೆ ಕಳುಹಿಸಲಾಗುತ್ತದೆ. ಹೀಗಿದ್ದರೂ ಜೈಲಿನೊಳಗೆ ಇರುವವರಿಗೂ ಕೊರೊನಾ ಹೇಗೆ ಹರಡಿದೆ ಎಂದು ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *