ಚಾಮರಾಜನಗರಕ್ಕೆ ವೀರಪ್ಪನ್ ಕಾರ್ಯಕ್ಷೇತ್ರದಿಂದ ನುಸುಳಿ ಬರ್ತಿರೋ ತಮಿಳರು

ಚಾಮರಾಜನಗರ: ಕೊರೊನಾ ಪ್ರಕರಣಗಳ ಹೈ ರಿಸ್ಕ್ ರಾಜ್ಯಗಳಲ್ಲಿ ಒಂದಾದ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಪ್ರವೇಶ ನಿಷೇಧ ಹೇರಿರುವುದರಿಂದ ತಮಿಳರು ಗಡಿಭಾಗದಲ್ಲಿ ಕಾಡಿನ ಅಡ್ಡದಾರಿಗಳ ಮೂಲಕ ನುಸುಳುತ್ತಿದ್ದಾರೆ.

ಕಾಡುಗಳ್ಳ ವೀರಪ್ಪನ್ ಕಾರ್ಯಕ್ಷೇತ್ರವಾದ ಮಹದೇಶ್ವರಬೆಟ್ಟ ಅರಣ್ಯದಲ್ಲಿ ಪಾಲಾರ್ ಹಳ್ಳ ದಾಟಿ ಬರತೊಡಗಿದ್ದಾರೆ. ಹಾಗೆಯೇ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ನಿವಾಸಿಗಳು ಸಹ ಕಾಡುದಾರಿಗಳ ಮೂಲಕ ತಮಿಳುನಾಡಿಗೆ ಹೋಗಿ ಬರುತ್ತಿದ್ದಾರೆ. ಪಾಲಾರ್ ನದಿಯ ಪಕ್ಕದಲ್ಲೇ ಚೆಕ್‍ಪೋಸ್ಟ್ ಇದ್ದರೂ ಪೊಲೀಸರ ಕಣ್ಣು ತಪ್ಪಿಸಿ ಓಡಾಟ ನಡೆಸಲಾಗುತ್ತಿದೆ. ವ್ಯಾಪಾರ, ವಹಿವಾಟು, ಆಸ್ಪತ್ರೆ ಮೊದಲಾದ ಕೆಲಸಗಳಿಗೆ ಕಾಡುದಾರಿಗಳ ಮೂಲಕ ನುಸುಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಅಕ್ರಮ ನುಸುವಳಿಕೆ ತಡೆಗಟ್ಟಲು ನಿರಂತರವಾಗಿ ಗಸ್ತು ನಡೆಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಅಡ್ಡದಾರಿಗಳ ಮೂಲಕ ಬರುವುದನ್ನು ತಡೆಗಟ್ಟಲು ಪೊಲೀಸ್, ಕಂದಾಯ ಹಾಗೂ ಅರಣ್ಯ ಇಲಾಖೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಯಾರೇ ಹೊಸಬರು ಬಂದರೂ ತಕ್ಷಣ ಮಾಹಿತಿ ನೀಡುವಂತೆ ಗ್ರಾಮ ಕಾರ್ಯಪಡೆಗಳಿಗೂ ಸೂಚಿಸಲಾಗಿದ್ದು, ಅಂತರಾಜ್ಯಗಳಿಂದ ಬರುವವರನ್ನು ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಇದೇ ವಿಷಯಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ತಮಿಳುನಾಡಿನಿಂದ ಬರಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಕೆಲವರು ಕಾಡುದಾರಿಗಳ ಮೂಲಕ ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಹೀಗೆ ಅನುಮತಿ ಇಲ್ಲದೆ ಅಡ್ಡದಾರಿಗಳ ಮೂಲಕ ಬಂದಿರುವವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *