ಚಹಾ ಮಾರುವವನ ಮಗಳು ಏರ್‌ಫೋರ್ಸ್ ಅಧಿಕಾರಿಯಾಗಿ ಆಯ್ಕೆ- ಅಪ್ಪಂದಿರ ದಿನಕ್ಕೆ ಮರೆಯಲಾಗದ ಉಡುಗೊರೆ

– ಸಾಲ ಮಾಡಿ ಶಿಕ್ಷಣ ಕೊಡಿಸಿದ್ದ ತಂದೆ
– ಮಗಳ ಸಾಧನೆ ಕಂಡು ಹೆಮ್ಮೆ

ಭೋಪಾಲ್: ಚಹಾ ಅಂಗಡಿ ಮಾಲೀಕನ ಮಗಳು ಭಾರತೀಯ ವಾಯು ಪಡೆಯ ಅಧಿಕಾರಿಯಾಗಿ ಆಯ್ಕೆಯಾಗುವ ಮೂಲಕ ಅಪ್ಪಂದಿರ ದಿನಕ್ಕೆ ತಮ್ಮ ತಂದೆಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಮಧ್ಯಪ್ರದೇಶದ ಪುಟ್ಟ ಜಿಲ್ಲೆ ನೀಮುಚ್‍ನಲ್ಲಿ ಚಹಾ ಅಂಗಡಿ ಇಟ್ಟುಕೊಂಡಿರುವ ಸುರೇಶ್ ಗಂಗ್ವಾಲ್ ಅವರ ಪುತ್ರಿ ಆಂಚಲ್, ಫ್ಲೈಯಿಂಗ್ ಆಫೀಸರ್ ಆಗಿ ಆಯ್ಕೆಯಾಗಿರುವುದು ಮಾತ್ರವಲ್ಲದೆ ಕಂಬೈನ್ಡ್ ಗ್ರಾಜ್ಯುವೇಶನ್ ಪರೇಡ್‍ನಲ್ಲಿ ರಾಷ್ಟ್ರಪತಿಯವರಿಂದ ಪದಕವನ್ನೂ ಸ್ವೀಕರಿಸಿದ್ದಾರೆ. ಒಟ್ಟು 123 ಫ್ಲೈಟ್ ಕೆಡೆಟ್‍ಗಳನ್ನು ಭಾರತೀಯ ವಾಯುಪಡೆಯ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ತಮ್ಮ ಮಗಳ ಸಾಧನೆ ಬಗ್ಗೆ ತಂದೆ ಸುರೇಶ್ ಅವರು ಸಂತಸ ವ್ಯಕ್ತಪಡಿಸಿದ್ದು, ಯಾವುದೇ ತಂದೆಗೆ ಮಗಳು ನೀಡುವ ಅತ್ಯದ್ಭುತ ಉಡುಗೊರೆ ಇದು. ನನ್ನ ಮಗಳು ಯಾವಾಗಲೂ ನಾನು ಹೆಮ್ಮೆ ಪಡುವಂತೆಯೇ ಮಾಡಿದ್ದಾಳೆ ಎಂದಿದ್ದಾರೆ.

ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಹೀಗಾಗಿ ಎಲ್ಲ ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ನನ್ನ ಪತ್ನಿ ಎಂದೂ ಒಡವೆ ಹಾಗೂ ಬೆಲೆ ಬಾಳುವ ವಸ್ತುಗಳು ಬೇಕೆಂದು ಬೇಡಿಕೆ ಇಟ್ಟ ನೆನಪಿಲ್ಲ. ಈಗಲೂ ಅವಳು ಚಿನ್ನದ ಒಡವೆಗಳನ್ನು ಹಾಕುವುದಿಲ್ಲ. ನಾವು ನಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡುತ್ತೇವೆ ಎಂದು ವಿವರಿಸಿದ್ದಾರೆ.

ಕುಟುಂಬಕ್ಕೆ ಸಹಾಯ ಮಾಡಲು ಸುರೇಶ್ 10ನೇ ತರಗತಿ ನಂತರ ಶಿಕ್ಷಣಕ್ಕೆ ಗುಡ್‍ಬೈ ಹೇಳಿದ್ದರು. ಹೀಗಾಗಿ ಅವರು ಸಾಧಿಸದಿರುವುದನ್ನು ಮಕ್ಕಳು ಸಾಧಿಸಬೇಕು ಎಂಬುದು ಅವರ ಬಯಕೆಯಾಗಿದೆ. ಮಕ್ಕಳನ್ನು ಎಂಜಿನಿಯರಿಂಗ್ ಮಾಡಿಸುತ್ತಿದುದರ ಮಧ್ಯೆಯೂ ಮಗಳನ್ನು ಇಂದೋರ್‍ನಲ್ಲಿ ಕೋಚಿಂಗ್‍ಗೆ ಸೇರಿಸಲು ನಾನು ಸಾಲ ಪಡೆದಿದ್ದೆ. ಮಕ್ಕಳು ಸಾಧಿಸುತ್ತಾರೆ ಎಂಬ ನಂಬಿಕೆ ನನಗಿತ್ತು. ಅವರು ಕೆಲಸಕ್ಕೆ ಸೇರಿದ ಬಳಿಕ ಸಾಲ ತೀರಿಸಬಹುದೆಂದು ಸಾಲ ಮಾಡಿ ಓದಿಸಿದೆ.

ಮಗಳ ಕಾಲೇಜಿನ ಘಟಿಕೋತ್ಸವಕ್ಕೆ ಹೈದರಾಬಾದ್‍ಗೆ ಹೋಗಲು ಆಗಿರಲಿಲ್ಲ. ಅಲ್ಲದೆ ಕಳೆದ ಬಾರಿ ನೀಮುಚ್‍ಗೆ ಬಂದಾಗ ಅವಳು ಈ ಕಾರ್ಯಕ್ರಮಕ್ಕೂ ನಮ್ಮೆಲ್ಲರನ್ನು ಆಹ್ವಾನಿಸಿದ್ದಳು. ಆದರೆ ಲಾಕ್‍ಡೌನ್ ಹಿನ್ನೆಲೆ ಈ ಕಾರ್ಯಕ್ರಮಕ್ಕೂ ಹೋಗಲು ಸಾಧ್ಯವಾಗಿರಲಿಲ್ಲ. ನಮ್ಮ ಆಶೀರ್ವಾದ ಯಾವಾಗಲೂ ಅವಳ ಮೇಲಿರುತ್ತದೆ. ಅಲ್ಲದೆ ದೇಶಕ್ಕಾಗಿ ಅವಳು ಏನು ಬೇಕಾದರೂ ಮಾಡುತ್ತಾಳೆ ಎಂದು ಸುರೇಶ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *