ಚಲಿಸುತ್ತಿದ್ದ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ- ಬೆಂಗ್ಳೂರು ಪೊಲೀಸರಿಗೆ ಧನ್ಯವಾದ

ಬೆಂಗಳೂರು: ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಚಲಿಸುತ್ತಿದ್ದ ರೈಲಿನಲ್ಲೇ ವಲಸೆ ಕಾರ್ಮಿಕ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ.

ಉತ್ತರಪ್ರದೇಶ ಮೂಲದ ಸಂಗೀತಾ ಹಾಗೂ ಸಂದೀಪ್ ದಂಪತಿ ನಗರದ ವೈಟ್ ಫೀಲ್ಡ್ ಬಳಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ದಂಪತಿ ಇದೇ 21 ರಂದು ಶ್ರಮಿಕ್ ರೈಲಿನಲ್ಲಿ ತವರು ರಾಜ್ಯ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸಂಗೀತಾ ರೈಲಿನಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಇಬ್ಬರೂ ಕ್ಷೇಮವಾಗಿ ತವರು ಸೇರಿದ್ದಾರೆ.

ತುಂಬು ಗರ್ಭಿಣಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದ ವೈಟ್ ಫೀಲ್ಡ್ ಡಿಸಿಪಿ ಅನುಚೇತ್ ಹಾಗೂ ಐಎಫ್‍ಎಸ್ ಆಧಿಕಾರಿಯ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಗುವಿನೊಂದಿಗೆ ಕ್ಷೇಮವಾಗಿ ಊರು ತಲುಪಿದ್ದಾಗಿ ದಂಪತಿ ಅನುಚೇತ್ ಅವರಿಗೆ ಫೋಟೋ ಶೇರ್ ಮಾಡಿದ್ದಾರೆ.

ಸಂಗೀತಾ ಗರ್ಭಿಣಿಯಾಗಿದ್ದರಿಂದ ಟ್ರಾವೆಲ್ ಮಾಡೋದು ಬೇಡ ಎಂದು ಮಹಿಳಾ ಐಎಫ್‍ಎಸ್ ಅಧಿಕಾರಿ ಬುದ್ಧಿ ಹೇಳಿದ್ದರು. ಆದರೆ ಇದಕ್ಕೆ ಒಪ್ಪದ ಸಂಗೀತಾ ತವರೂರಿಗೆ ಹೋಗಲೇಬೇಕೆಂದು ಹಠ ಹಿಡಿದಿದ್ದರು. ಈ ವೇಳೆ ಡಿಸಿಪಿ ಎಂ.ಎನ್.ಅನುಚೇತ್ ಅವರು ಸೇವಾಸಿಂದು ಪೋರ್ಟಲ್‍ನಲ್ಲಿ ದಂಪತಿಯ ನೋಂದಣಿ ಮಾಡಿಸಿದ್ದರು. ಬಳಿಕ ರೈಲು ಟಿಕೆಟ್ ಕೊಡಿಸಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಿದ್ದರು.

ಮೇ 21ರಂದು ಶ್ರಮಿಕ್ ರೈಲಿನಲ್ಲಿ ಊರಿಗೆ ಹೊರಟಿದ್ದ ಸಂಗೀತಾ ಮಾರ್ಗ ಮಧ್ಯೆ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಶ್ರಮಿಕ್ ರೈಲು ಶನಿವಾರ ಉತ್ತರಪ್ರದೇಶದ ಲಕ್ನೋ ತಲುಪಿದ್ದು, ಮಗುವಿನೊಂದಿಗೆ ಕ್ಷೇಮವಾಗಿ ಊರು ತಲುಪಿದ್ದಾಗಿ ದಂಪತಿ ಅನುಚೇತ್ ಅವರಿಗೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *