ಚನ್ನರಾಯಪಟ್ಟಣದಲ್ಲಿ ಮತ್ತೊಂದು ಕೊಲೆ – ಕಳೆದ ಒಂದೂವರೆ ತಿಂಗ್ಳಲ್ಲಿ ಜಿಲ್ಲೆಯಲ್ಲಿ 9 ಮರ್ಡರ್

– ಎದೆಗೆ ಗುಂಡು ಹಾರಿಸಿ ಯುವಕನ ಬರ್ಬರ ಹತ್ಯೆ

ಹಾಸನ: ಬಡವರ ಊಟಿ ಎನಿಸಿಕೊಂಡಿರುವ ಹಾಸನ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಸುಮಾರು 9 ಕೊಲೆಗಳು ನಡೆದಿದ್ದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ಕಳೆದ ರಾತ್ರಿ ಕೂಡ ಚನ್ನರಾಯಪಟ್ಟಣ ತಾಲೂಕಿನ, ಬೇಡಿಗನಹಳ್ಳಿ ಸಮೀಪ ಸುಮಾರು 25 ವರ್ಷದ ಯುವಕನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ತಾಲೂಕಿನ ಹೊಸೂರು ಗ್ರಾಮದ ಹೇಮಂತ್ ಎಂಬವರ ಹಿರಿಯ ಮಗ ಪುನೀತ್ (25) ಮೃತ ಯುವಕ.

ಮೃತ ಯುವಕನ ತಂದೆ ಹೇಮಂತ್ ಹಾಗೂ ಪತ್ನಿ ಯಶೋಧಾ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಹೊಸೂರು ಗ್ರಾಮದಲ್ಲಿ ತಂದೆ ಹೇಮಂತ್ ಜೊತೆ ಎರಡನೇ ಮಗ ಪ್ರಶಾಂತ್ ಇದ್ದರೆ, ತಾಯಿ ಯಶೋಧಾ ಜೊತೆ ಬೇಡಿಗನಹಳ್ಳಿ ಗ್ರಾಮದಲ್ಲಿ ಪುನೀತ್ ವಾಸವಾಗಿದ್ದನು. ರಾತ್ರಿ 8 ಗಂಟೆ ಸುಮಾರಿನಲ್ಲಿ ಹೊಸೂರು ಗ್ರಾಮದ ದೊಡ್ಡಪ್ಪನ ಮನೆಯಲ್ಲಿ ಊಟ ಮುಗಿಸಿಕೊಂಡು ಬೇಡಿಗನಹಳ್ಳಿಗೆ ಕೆರೆ ಏರಿ ಮೇಲೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪುನೀತನ ಎಡಗೈ ಹಾಗೂ ಎದೆಯ ಭಾಗಕ್ಕೆ ಎರಡು ಗುಂಡು ಬಿದ್ದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಹಾಸನ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಸುಮಾರು 9 ಕೊಲೆ ಪ್ರಕರಣಗಳು ವರದಿಯಾಗಿದ್ದು ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಲಾಕ್‍ಡೌನ್ ನಂತರ ಹಾಸನದಲ್ಲಿ ಕ್ರೈಂ ಹೆಚ್ಚಳವಾಗುತ್ತಿದೆ ಎಂಬ ಆತಂಕ ಮೂಡಿಸಿದೆ.

Comments

Leave a Reply

Your email address will not be published. Required fields are marked *