ಗ್ರಾ.ಪಂ.ಅಧ್ಯಕ್ಷ ಸ್ಥಾನಕ್ಕಾಗಿ ಎರಡು ಗುಂಪುಗಳಿಂದ ಹೋರಾಟ

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಗೆ ಜಾತಿಗಳ ನಡುವೆ ಹಗ್ಗ ಜಗ್ಗಾಟ ಶುರುವಾಗಿದೆ.

ಬಾಲೇಹೊಸೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಎಸ್.ಸಿ ಮಹಿಳಾ ಕೋಟಾ ಬಂದಿದ್ದು, ಅಧ್ಯಕ್ಷ ಖುರ್ಚಿಗಾಗಿ ಎರಡು ಸಮುದಾಯಗಳು ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿವೆ.

ಗ್ರಾಮದ ಘಂಟಿಚೋರ್ ಹಾಗೂ ದಲಿತ ಸಮುದಾಯದ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಘಂಟಿಚೋರ್ ಸಮುದಾಯದವರು ಪ್ರವರ್ಗ-1ಕ್ಕೆ ಒಳಪಡುತ್ತಾರೆ. ಆದರೆ ಎಸ್.ಸಿ ಎಂದು ನಕಲಿ ಜಾತಿ ಪ್ರಮಾಣ ಪತ್ರ ಪಡೆದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಜೊತೆಗೆ ಸರ್ಕಾರದ ಯೋಜನೆಗಳನ್ನುದುರುಪಯೋಗ ಪಡೆಸಿಕೊಳ್ಳುವ ಮೂಲಕ ನಿಜವಾದ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದಲಿತ ಹೋರಾಟಗಾರರು ಆರೋಪಿಸಿದ್ದಾರೆ.

ಘಂಟಿಚೋರರು ಎಸ್.ಸಿ ಹೌದೋ ಅಲ್ಲವೋ ಎಂಬುದರ ಬಗ್ಗೆ ಧಾರವಾಡ ಹೈ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಈ ಪ್ರಕರಣ ಇತ್ಯರ್ಥ ಆಗುವ ವರೆಗೂ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮುಂದೂಡಬೇಕೆಂದು ದಲಿತರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ಘಂಟಿಚೋರರು ಎಸ್.ಸಿ ಎಂದು ಈ ಹಿಂದೆಯೇ ತಹಶೀಲ್ದಾರ್ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ಆದರೂ ನೀವು ಎಸ್.ಸಿ ಅಲ್ಲ, ಪ್ರವರ್ಗ-1ಕ್ಕೆ ಒಳಪಡುತ್ತೀರಿ ಎಂದು ನಮಗೆ ಅವಮಾನ ಮಾಡುವ ಜೊತೆಗೆ ಜಾತಿ ನಿಂದನೆ ಮಾಡುತ್ತಿದ್ದಾರೆ. ನಮ್ಮ ವಿರುದ್ಧ ಹೋರಾಟಕ್ಕಿಳಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನ್ಯಾಯ ಕೊಡಿಸಬೇಕೆಂದು ಘಂಟಿಚೋರ್ ಸಮುದಾಯದವರೂ ಹೋರಾಟಕ್ಕೆ ಇಳಿದಿದ್ದಾರೆ. ಬಾಲೇಹೊಸೂರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಇಂದೇ ಕೊನೆಯ ದಿನವಾಗಿದ್ದು, ಈ ಬಗ್ಗೆ ಎರಡೂ ಸಮುದಾಯದವರು ಹೋರಾಟಕ್ಕಿಳಿದಿದ್ದಾರೆ. ಆಯ್ಕೆ ಪ್ರಕ್ರಿಯೆ ಮುಂದೂಡಬೇಕು ಇಲ್ಲವೇ, ತಹಶೀಲ್ದಾರ್, ಎಸಿ ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗೊಂದಲಕ್ಕೆ ಇತಿಶ್ರೀ ಹಾಡಬೇಕು ಎಂದು ಎರಡೂ ಕಡೆಯ ಹೋರಾಟಗಾರರು ಪಟ್ಟುಹಿಡಿದಿದ್ದಾರೆ.

Comments

Leave a Reply

Your email address will not be published. Required fields are marked *