ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಸಾಧನೆ: ಈಶ್ವರಪ್ಪ

ಶಿವಮೊಗ್ಗ: ಕಳೆದ ಒಂದು ವರ್ಷದ ಅವಧಿಯಲ್ಲಿ ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿ, ರಸ್ತೆ ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಉದ್ಯೋಗ ಸೃಷ್ಟಿ ಸೇರಿದಂತೆ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಳೆದ ಒಂದು ವರ್ಷದ ಅವಧಿಯಲ್ಲಿ ಸರ್ಕಾರ ಮಾಡಿರುವ ಸಾಧನೆಗಳ ವಿವರಗಳನ್ನು ನೀಡಿದರು.

ರಾಜ್ಯದಲ್ಲಿ 85 ಸಾವಿರಕ್ಕೂ ಅಧಿಕ ರೈತರು ತಮ್ಮ ಜಮೀನುಗಳಲ್ಲಿ ಕಂದಕ ಬದು ಹಾಗೂ 35 ಸಾವಿರಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಿರುವುದು ದಾಖಲೆಯಾಗಿದೆ. ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಇದೇ ಮೊದಲ ಬಾರಿಗೆ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಮೊದಲ ಹಂತದಲ್ಲಿ 3620 ಕಿ.ಮೀ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದ್ದು, ಈಗಾಗಲೇ 909ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನುಳಿದ 2063 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಪ್ರವಾಹದಿಂದ ಹಾನಿಗೊಳಗಾದ ರಸ್ತೆ ಹಾಗೂ ಸೇತುವೆಗಳ ನಿರ್ಮಾಣಕ್ಕಾಗಿ 1,500ಕೋಟಿ ರೂ. ವಿಶೇಷ ಅನುದಾನ ಒದಗಿಸಲಾಗಿದ್ದು, ಒಟ್ಟು 8,972 ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಹೇಳಿದರು.

ರಾಜ್ಯದ 49 ಬರಪೀಡಿತ ತಾಲೂಕುಗಳಿಗೆ ತಲಾ 1ಕೋಟಿ ರೂ. ಹಾಗೂ ಇತರ ತಾಲೂಕುಗಳಿಗೆ ತಲಾ 50ಲಕ್ಷ ರೂ. ಕುಡಿಯುವ ನೀರಿನ ಕಾಮಗಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ 474 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡಿದ್ದು, 1.15ಕೋಟಿ ಗ್ರಾಮೀಣ ಜನರಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದರು.

ರಾಜ್ಯದ 6012 ಗ್ರಾಮ ಪಂಚಾಯತ್ ಕಚೇರಿ ಕಟ್ಟಡಗಳಿಗೆ 3.4ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಅಳವಡಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *