ಗ್ರಾಮಮಟ್ಟದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮೈಕ್ರೋ ಕಂಟೇನ್ಮೆಂಟ್ ಜೋನ್ ನಿರ್ಮಾಣ – ಬೊಮ್ಮಾಯಿ

– ಸರ್ಕಾರದ ಗಮನ ಈಗ ಗ್ರಾಮೀಣದ ಕಡೆಗೆ

ಬೆಂಗಳೂರು: ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಗ್ರಾಮಾಂತರ ಪ್ರದೇಶದಲ್ಲಿ ಮೈಕ್ರೋ ಕಂಟೇನ್ಮೆಂಟ್ ವಲಯ ನಿರ್ಮಾಣ ಮಾಡುವ ಮೂಲಕ ಕೋವಿಡ್ ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ತನ್ನ ಸಂಪೂರ್ಣ ಗಮನವನ್ನು ಗ್ರಾಮೀಣ ಭಾಗದೆಡೆ ಮೀಸಲಿರಿಸಲು ನಿರ್ಧರಿಸಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೈಕ್ರೋ ಕಂಟೇನ್ಮೆಂಟ್ ವಲಯ ಸ್ಥಾಪಿಸುವ ಜವಾಬ್ದಾರಿಯನ್ನು ಪಿಡಿಓ, ತಾಲೂಕು ಆರೋಗ್ಯ ಅಧಿಕಾರಿ ಮತ್ತು ಪೊಲೀಸರಿಗೆ ವಹಿಸಲಾಗಿದೆ ಎಂದರು.

ಕೋವಿಡ್ ಸೋಂಕಿತರು ಯಾವ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೋ ಆ ಗ್ರಾಮಗಳಲ್ಲಿ ಮೈಕ್ರೋ ಕಂಟೇನ್ಮೆಂಟ್ ಜೋನ್‍ಗಳನ್ನು ನಿರ್ಮಿಸಲಾಗುವುದು. ಈ ರೀತಿ ಜೋನ್ ನಿರ್ಮಿಸದ ಹೊರತು ಕೋವಿಡ್ ಹರಡುವುದನ್ನು ನಿಲ್ಲಿಸಲು ಗ್ರಾಮಾಂತರ ಪ್ರದೇಶದಲ್ಲಿ ಅಸಾಧ್ಯ. ಹೀಗಾಗಿ ಈ ಜೋನ್‍ಗಳಿಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ತಪಾಸಣೆ ನಡೆಸುವಂತೆ ವೈದ್ಯರಿಗೆ ಆದೇಶ ನೀಡಲಾಗಿದೆ. ಸೋಂಕಿತರಿಗೆ ವಿಟಮಿನ್-ಸಿ, ಜಿಂಕ್ ಸೇರಿದಂತೆ ಕೋವಿಡ್‍ಗೆ ನೀಡಲಾಗುವ ಎಲ್ಲಾ ಔಷದೋಪಚಾರವನ್ನು ನೀಡಲಾಗುವುದು. ಪ್ರಾಥಮಿಕ ಮಾಹಿತಿಯನ್ನು ಕಡ್ಡಾಯವಾಗಿ ಆರ್‌ಟಿಪಿಸಿಆರ್ ಮತ್ತು RAT ಟೆಸ್ಟಿಂಗ್ ಒಳಪಡಿಸಲಾಗುವುದು ಎಂದು ಹೇಳಿದರು.

ಸಿಎಂ ವಿಡಿಯೋ ಕಾನ್ಫರೆನ್ಸ್: ಕೋವಿಡ್ ಹೆಚ್ಚಾಗಿ ಕಾಣಿಸಿಕೊಂಡಿರುವ ರಾಜ್ಯದ ಆಯ್ದ ಕೆಲ ಗ್ರಾಮಪಂಚಾಯಿತಿಗಳ ಜೊತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುದುವಾರ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಅದರೊಂದಿಗೆ ಗ್ರಾಮಾಂತರ ಪ್ರದೇಶದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಸಿಎಂ ಅವಲೋಕನ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಬ್ಲಾಕ್ ಫಂಗಸ್‍ಗೆ 1,000 ಇಂಜೆಕ್ಷನ್: ರಾಜ್ಯದಲ್ಲಿ ಬ್ಲಾಕ್ ಫಂಗಸ್ ಸೋಂಕು ಹರಡುತ್ತಿದೆ. ಇದರ ನಿವಾರಣೆಗೆ ಕೇಂದ್ರ ರಾಸಾಯನಿಕ ಸಚಿವ ಡಿವಿ ಸದಾನಂದ ಗೌಡರು 1,000ಕ್ಕೂ ಹೆಚ್ಚು ಇಂಜೆಕ್ಷನ್ ವಿತರಣೆ ಮಾಡುವ ಭರವಸೆ ನೀಡಿದ್ದಾರೆ. ಬೆಂಗಳೂರು, ಧಾರವಾಡ ಸೇರಿದಂತೆ ಯಾವ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಹರಡುತಿದೆಯೋ ಅಲ್ಲಿ ಈ ಚಿಕಿತ್ಸೆಗೆ ವಿಶೇಷವಾದ ವಾರ್ಡ್ ನಿರ್ಮಾಣ ಮಾಡುವಂತೆ ಸೂಚನೆ ನೀಡಲಾಗಿದೆ. ಅದರ ಜೊತೆಗೆ ಮಕ್ಕಳಿಗೆ ಚಿಕಿತ್ಸೆ ನೀಡಲು ಜಿಲ್ಲಾಮಟ್ಟದಲ್ಲಿ ಮಕ್ಕಳ ವಿಶೇಷ ವಾರ್ಡ್ ಹಾಗೂ ಅದರ ಜೊತೆಗೆ ಐಸಿಯು ಚಿಕಿತ್ಸಾ ಸೌಲಭ್ಯವನ್ನು ವ್ಯವಸ್ಥೆ ಮಾಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಇಂದು ಸಂಜೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೋವಿಡ್ ನಿರ್ವಹಣೆ ಉಸ್ತುವಾರಿ ಜವಾಬ್ದಾರಿ ನೀಡಿರುವ ಸಚಿವರು ಸಭೆ ಕರೆದಿದ್ದಾರೆ. ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಬ್ಲಾಕ್ ಫಂಗಸ್ ಹರಡುವ ಕುರಿತು ಚರ್ಚೆಯಾಗಲಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *