ಗ್ಯಾಂಗ್‍ಸ್ಟಾರ್ ದುಬೆ ಅರೆಸ್ಟ್ – ಸುಳಿವು ನೀಡಿದ ಸೆಕ್ಯೂರಿಟಿ ಗಾರ್ಡ್ ಹೇಳಿದ್ದೇನು?

ಭೋಪಾಲ್: ಉತ್ತರ ಪ್ರದೇಶದಲ್ಲಿ 8 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ರೌಡಿ ಶೀಟರ್ ವಿಕಾಸ್ ದುಬೆಯನ್ನು ಪೊಲೀಸರು ಇಂದು ಮಧ್ಯಪ್ರದೇಶದ ದೇವಾಲಯದಲ್ಲಿ ಬಂಧಿಸಿದ್ದಾರೆ.

ನಕಲಿ ಐಡಿ ಕಾರ್ಡ್ ಬಳಸಿ ಮಧ್ಯ ಪ್ರದೇಶಕ್ಕೆ ಎಂಟ್ರಿಕೊಟ್ಟಿದ್ದ ದುಬೆ, ಅಲ್ಲಿನ ಉಜ್ಜೈನ್‍ನಲ್ಲಿರುವ ಮಹಾಕಾಳಿ ದೇವಸ್ಥಾನಕ್ಕೆ ಬಂದಿದ್ದ. ಈ ವೇಳೆ ಆತನನ್ನು ಗುರುತಿಸಿದ ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್ ಲಖನ್ ಯಾದವ್, ಪೊಲೀಸರಿಗೆ ವಿಷಯ ತಿಳಿಸಿದ್ದರು. ಈ ಮೂಲಕ ಕುಖ್ಯಾತ ರೌಡಿಯನ್ನು ಬಂಧಿಸುವಲ್ಲಿ ನೆರವಾಗಿದ್ದರು.

ಈ ಬಗ್ಗೆ ಮಾತನಾಡಿರುವ ಲಖನ್ ಯಾದವ್ ಅವರು, ನಾನು ಈ ಮೊದಲೇ ಫೋಟೋದಲ್ಲಿ ವಿಕಾಸ್ ದುಬೆಯನ್ನು ನೋಡಿದ್ದೆ. ದುಬೆ ಇಂದು ಬೆಳಗ್ಗೆ 7 ಗಂಟೆಗೆ ದೇವಸ್ಥಾನಕ್ಕೆ ಬಂದ. ಜೊತೆಗೆ ಅವನು ಹಿಂದಿನ ಬಾಗಿಲಿನಿಂದ ದೇವಸ್ಥಾನದ ಒಳ ಬರಲು ಪ್ರಯತ್ನಿಸುತ್ತಿದ್ದ. ವಿಕಾಸ್ ದುಬೆ ನಡವಳಿಕೆ ನೋಡಿ ನನಗೆ ಅನುಮಾನ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಆತ ವಿಐಪಿ ಪಾಸ್ ಪಡೆದಿದ್ದರೂ ದೇವಸ್ಥಾನದ ಒಳಗೆ ಬರಲು ಹಿಂದೆ ಮುಂದೆ ನೋಡುತ್ತಿದ್ದ ಎಂದು ಹೇಳಿದ್ದಾರೆ.

ಈ ವೇಳೆ ನಾನು ದೇವಸ್ಥಾನದಲ್ಲಿ ಆತನನ್ನು ತಡೆದು ವಿಚಾರಣೆ ಮಾಡಿದೆ. ಆತ ಏನೂ ಮಾತನಾಡಲಿಲ್ಲ. ನಂತರ ಸ್ಥಳಕ್ಕೆ ಬಂದು ಪೊಲೀಸರು ಆತನನ್ನು ಕರೆದುಕೊಂಡು ಹೋದರು ಎಂದು ಯಾದವ್ ಅವರು ತಿಳಿಸಿದ್ದಾರೆ. ಮಧ್ಯ ಪ್ರದೇಶದ ಪೊಲೀಸರು ಆತನನ್ನು ಬಂಧಿಸಿದ್ದು, ಉತ್ತರ ಪ್ರದೇಶದ ಪೊಲೀಸರಿಗೆ ಒಪ್ಪಿಸಲು ಸಿದ್ಧವಿದ್ದಾರೆ. ಈ ನಡುವೆ ಉತ್ತರ ಪ್ರದೇಶದಲ್ಲಿ ಇಬ್ಬರು ದುಬೆ ಸಹಚರರನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ.

ಇಂದು ಬೆಳಗ್ಗೆ ಮಧ್ಯಪ್ರದೇಶದ ಪೊಲೀಸರು ವಿಕಾಸ್ ದುಬೆಯನ್ನು ಬಂಧಿಸಿದ್ದಾರೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ದೃಢಪಡಿಸಿದ್ದರು. ಉತ್ತರ ಪ್ರದೇಶದಲ್ಲಿ ಆತ ಘಟನೆಯ ನಂತರ ನಮ್ಮ ರಾಜ್ಯ ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದ ಕಾರಣ ಇಂದು ದುಬೆಯನ್ನು ಬಂಧಿಸಲು ಸಾಧ್ಯವಾಯ್ತು ಎಂದು ಮಿಶ್ರಾ ತಿಳಿಸಿದ್ದಾರೆ. ಇದರ ಜೊತೆಗೆ ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾನ್, ಉಜ್ಜೈನಿ ಪೊಲೀಸರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.

ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲು ದಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವಿಚಾರ ಮೊದಲೇ ತಿಳಿದಿದ್ದ ವಿಕಾಸ್ ದುಬೆ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆರವುಗೊಳಿಸಿ ಪೊಲೀಸರು ದುಬೆ ಅವಿತಿದ್ದ ಮನೆಯತ್ತ ಆಗಮಿಸುತ್ತಿದ್ದರು. ಈ ವೇಳೆ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ ಎಂಟು ಮಂದಿ ಪೊಲೀಸರು ಸಾವನ್ನಪ್ಪಿದ್ದರು.

Comments

Leave a Reply

Your email address will not be published. Required fields are marked *