ಗ್ಯಾಂಗ್‍ಸ್ಟರ್ ಆಗುವಾಸೆಗೆ ರೌಡಿ ಶೀಟರ್ ಕೊಲೆ- ಜೈಲು ಪಾಲಾದ ಪುಡಿ ರೌಡಿಗಳು

ಕೋಲಾರ: ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಮಾಲೂರು ತಾಲೂಕಿನಲ್ಲೂ ಪುಡಿರೌಡಿಗಳ ಹಾವಳಿ ಹೆಚ್ಚಾಗಿದೆ. ಗ್ಯಾಂಗ್ ಕಟ್ಟೊದಕ್ಕೆ ಹಾಗೂ ರೌಡಿಸಂನಲ್ಲಿ ಹೆಸರು ಮಾಡಬೇಕೆಂದು ಪುಡಿರೌಡಿಗಳು ರೌಡಿಶೀಟರ್ ನನ್ನು ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಇದೀಗ ಜೈಲು ಪಾಲಾಗಿದ್ದಾರೆ.

ಮಾರ್ಚ್-18 ಮಧ್ಯಾಹ್ನ ಕೊಲೆ ಪ್ರಕರಣದಲ್ಲಿ ರೌಡಿಶೀಟರ್ ಗಿರೀಶ್ ಆರೋಪಿಯಾಗಿದ್ದ. ಕೊಲೆ ಪ್ರಕರಣದಲ್ಲಿ ಕೋರ್ಟ್‍ಗೆ ಹಾಜರಾಗಿ ವಾಪಸ್ಸಾಗುತ್ತಿದ್ದ ವೇಳೆ ಕೋಲಾರ ತಾಲೂಕು ಗಂಗಾಪುರ ಗ್ರಾಮದ ಬಳಿ ಆತನನ್ನು ಅಡ್ಡಗಟ್ಟಿದ್ದ ಪುಡಿ ರೌಡಿಗಳ ಗುಂಪು, ಮಾಲೂರು ತಾಲೂಕು ಹರಳೇರಿ ಗ್ರಾಮದ ರೌಡಿಶೀಟರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದರು. ಆರೋಪಿಗಳ ಬೆನ್ನು ಹತ್ತಿದ್ದ ಪೊಲೀಸರಿಗೆ ಒಟ್ಟು ಆರು ಜನ ಸಿಕ್ಕಿಬಿದ್ದಿದ್ದಾರೆ. ಹೊಸಕೋಟೆ ಮಣಿ ಹಾಗೂ ಆತನ ಗ್ಯಾಂಗ್ ಪ್ಲಾನ್ ಮಾಡಿ ಕೊಲೆ ಮಾಡಿರುವುದು ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ತಿಳಿದುಬಂದಿದೆ.

ಕೊಲೆ ಆರೋಪಿಗಳ ಪೈಕಿ ಯೋಗೇಶ್, ಮಂಜುನಾಥ್, ಪವನ್ ಜಾಕಿ ಆಲಿಯಾಸ್ ನಿಖಿಲ್, ಜೆಮಿನಿ ಆಲಿಯಾಸ್ ಜಯಂತ್, ಪ್ರತಾಪ್, ಕಾರ್ತಿಕ್ ಎಂಬುವರನ್ನು ಮಾಲೂರು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಪ್ರಕರಣದ ಕಿಂಗ್ ಪಿನ್ ಮಾಸ್ಟರ್ ಮೈಂಡ್ ಹೊಸಕೋಟೆ ಮಣಿ ಎಂಬಾತ ಇನ್ನು ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರ ತಂಡ ಹುಡಕಾಟ ನಡೆಸುತ್ತಿದೆ. ಒಟ್ಟು ಹನ್ನೊಂದು ಜನ ಕೊಲೆ ಆರೋಪಿಗಳಿದ್ದಾರೆ ಎನ್ನಲಾಗಿದ್ದು, ಈ ಪೈಕಿ ಸದ್ಯಕ್ಕೆ ಆರು ಜನರನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಅಪರಾಧ ಹಿನ್ನೆಲೆ ಹೊಂದಿರುವವರಾಗಿದ್ದು, ಇದೊಂದು ಗ್ಯಾಂಗ್ ವಾರ್ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *