ಗೋವನಕೊಪ್ಪ ಮಲಪ್ರಭಾ ಸೇತುವೆ ಮತ್ತೆ ಜಲಾವೃತ

– ಬಾದಾಮಿ- ಮೆಣಸಗಿ ಸಂಪರ್ಕ ಮತ್ತೆ ಕಡಿತ

ಬಾಗಲಕೋಟೆ: ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಭೀತಿ ಉಂಟಾಗಿದ್ದು, ಮಲಪ್ರಭಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ ಹಲವು ನದಿಗಳ ಸೇತುವೆಗಳು ತುಂಬಿ ಹರಿಯುತ್ತಿವೆ.

ಹೆಚ್ಚುವರಿಯಾಗಿ 10 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಟ್ಟಿದ್ದರಿಂದ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯ ಬಾದಾಮಿ ತಾಲೂಕಿನ ಗೋವನಕೊಪ್ಪ ಬಳಿಯ ಸೇತುವೆ ಪುನಃ ಜಲಾವೃತವಾಗಿದೆ. ಕಳೆದ ವಾರವಷ್ಟೇ ಭಾರೀ ಪ್ರವಾಹದಿಂದಾಗಿ ಮುಳುಗಡೆಯಾಗಿದ್ದ ಸೇತುವೆ ಎರಡು ದಿನಗಳ ಹಿಂದಷ್ಟೇ ಸಂಪರ್ಕಕ್ಕೆ ಮುಕ್ತವಾಗಿತ್ತು. ಇದೀಗ ಮತ್ತೆ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಸೇತುವೆ ಮೇಲೆ ಎರಡು-ಮೂರು ಅಡಿಯಷ್ಟು ನೀರು ಹರಿಯುತ್ತಿದ್ದು, ಸೇತುವೆ ಅಕ್ಕಪಕ್ಕದ ಹೊಲಗಳ ಬೆಳೆ ಜಲಾವೃತವಾಗಿದೆ. ಇದರಿಂದಾಗಿ ಪುನಃ ಬಾದಾಮಿ ತಾಲೂಕಿನ ಮಲಪ್ರಭಾ ತೀರದಲ್ಲಿ ಪ್ರವಾಹ ಆತಂಕ ಎದುರಾಗಿದೆ. ಬಾದಾಮಿಯಿಂದ ಗದಗ ಜಿಲ್ಲೆಯ ಮೆಣಸಗಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದವು. ಇದೀಗ ಸೇತುವೆ ಮುಳುಗಡೆಯಿಂದ ಸಂಪರ್ಕ ಕಡಿತಗೊಂಡಿದೆ.

Comments

Leave a Reply

Your email address will not be published. Required fields are marked *