ಗೋಕರ್ಣ ಭಕ್ತರಿಂದ ದಕ್ಷಿಣೆ ಸ್ವೀಕಾರ ವಿವಾದ- ರಾಮಚಂದ್ರಾಪುರ ಮಠಕ್ಕೆ ಮಹತ್ವದ ಗೆಲುವು

ಕಾರವಾರ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಿಸುವ ಹಾಗೂ ಭಕ್ತರಿಂದ ದಕ್ಷಿಣೆ ಸ್ವೀಕರಿಸಲು ಅನುವು ಮಾಡಿಕೊಡಬೇಕು ಎಂದು ಕೋರಿ ಅನಂತ್ ದತ್ತಾತ್ರೇಯ ಅಡಿ ಹಾಗೂ ಇತರ 24 ಮಂದಿ ಸಲ್ಲಿಸಿದ್ದ ಅರ್ಜಿ ಸಂಬಂಧ ಕಾರವಾರ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರಾಜ್ಯ ಹೈಕೋರ್ಟಿನ ಧಾರವಾಡ ಪೀಠ ವಜಾ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಕಾರವಾರ ಜಿಲ್ಲಾ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ ರಾಮಚಂದ್ರಾಪುರ ಮಠ ಮತ್ತು ಕುಮಟಾ ತಾಲೂಕಿನ ಗೋಕರ್ಣದ ಶ್ರೀಕ್ಷೇತ್ರ ಗೋಕರ್ಣದ ಉಪಾದಿವಂತ ಮಂಡಳಿಪರ ತೀರ್ಪು ನೀಡಲಾಗಿದೆ.

ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಪಾರಂಪರಿಕ ಪೂಜೆ ಮಾಡಿಸುವ ಹಾಗೂ ಭಕ್ತರಿಂದ ದಕ್ಷಿಣೆ ಸ್ವೀಕರಿಸಲು ಆಡಳಿತ ಮಂಡಳಿ ಅಡ್ಡಿಪಡಿಸದಂತೆ ಶಾಶ್ವತ ನಿರ್ಬಂಧಕಾಜ್ಞೆ ನೀಡಬೇಕು ಎಂದು ಕೋರಿ ಅರ್ಜಿದಾರರು ಕುಮಟಾ ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಜೊತೆಗೆ ತಾತ್ಕಾಲಿಕವಾಗಿ ಪೂಜೆ ಹಾಗೂ ದಕ್ಷಿಣೆ ಸ್ವೀಕಾರಕ್ಕೆ ಅವಕಾಶ ಕೋರಿದ್ದರು. ಇದಕ್ಕೆ ದೇವಾಲಯ ಆಡಳಿತ ಮಂಡಳಿ ಆಕ್ಷೇಪಣೆ ಸಲ್ಲಿಸಿತ್ತು. ಹೈಕೋರ್ಟ್ ಆದೇಶದ ಅನ್ವಯ ಈ ದಾವೆ ವಿಚಾರಣೆಯನ್ನು ಪ್ರಧಾನ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು.

ಕಾರವಾರ ನ್ಯಾಯಾಲಯ ಉಭಯ ಪಕ್ಷಗಳ ವಾದವನ್ನು ಆಲಿಸಿ ಅರ್ಜಿದಾರರ ಅರ್ಜಿಯನ್ನು ಭಾಗಶಃ ಪುರಸ್ಕರಿಸಿ ಆದೇಶ ಮಾಡಿತ್ತು. ಈ ಆದೇಶದ ವಿರುದ್ಧ ದೇವಾಲಯ ಆಡಳಿತವನ್ನು ನೋಡಿಕೊಳ್ಳುತ್ತಿರುವ ಶ್ರೀ ರಾಮಚಂದ್ರಾಪುರ ಮಠ ಮತ್ತು ಶ್ರೀಕ್ಷೇತ್ರ ಗೋಕರ್ಣ ಉಪಾದಿವಂತ ಮಂಡಳಿ ವತಿಯಿಂದ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಮಹತ್ವದ ಆದೇಶ ಹೊರಡಿಸಿ, ಶ್ರೀಮಠ ಹಾಗೂ ಉಪಾದಿವಂತ ಮಂಡಳಿ ಸಲ್ಲಿಸಿದ ಮೇಲ್ಮನವಿಯನ್ನು ಪುರಸ್ಕತಿಸಿ, ಜಿಲ್ಲಾ ನ್ಯಾಯಾಲಯದ ಆದೇಶವನ್ನು ವಜಾ ಮಾಡಿದೆ. ಜತೆಗೆ ವಾದಿಗಳು ಸಲ್ಲಿಸಿದ್ದ ತಾತ್ಕಾಲಿಕ ಅರ್ಜಿಯನ್ನು ಕೂಡ ತಿರಸ್ಕರಿಸಿದೆ.

Comments

Leave a Reply

Your email address will not be published. Required fields are marked *