ಗೂಗಲ್ ಪ್ಲೇ ಸ್ಟೋರ್‌ನಿಂದ ಔಟ್- ಗ್ರಾಹಕರಿಗೆ ಪೇಟಿಎಂ ಸ್ಪಷ್ಟನೆ

ನವದೆಹಲಿ: ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಗಳಿಂದ ಗೂಗಲ್ ಪ್ಲೇ ಸ್ಟೋರ್ ನಿಂದ ಪೇಟಿಎಂ ಆ್ಯಪ್ ಹಾಗೂ ಪೇಟಿಎಂ ಗೇಮ್ಸ್ ಅಪ್ಲಿಕೇಶನ್‍ಗಳನ್ನು ತೆಗೆದುಹಾಕಲಾಗಿದೆ. ಗ್ಯಾಂಬ್ಲಿಂಗನ್ನು ಪ್ರೇರೆಪಿಸುವ ಆ್ಯಪ್‍ಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಗೂಗಲ್ ತನ್ನ ಕ್ರಮದ ಕುರಿತು ಸ್ಪಷ್ಟನೆ ನೀಡಿದೆ.

ಗೂಗಲ್ ತನ್ನ ಬ್ಲಾಗ್‍ನಲ್ಲಿ ‘ಭಾರತದಲ್ಲಿ ಪ್ಲೇ ಸೋರ್ ನ ಜೂಜಾಟದ ನೀತಿಗಳ ಅರ್ಥ ಮಾಡಿಕೊಳ್ಳುವಿಕೆ’ ಎಂಬ ಶೀರ್ಷಿಕೆ ಅಡಿಯಲ್ಲಿ ಶುಕ್ರವಾರ ಬರಹವನ್ನು ಪ್ರಕಟಿಸಿದೆ. ಈ ಬರಹದಲ್ಲಿ ಹೊಸ ಮಾರ್ಗದರ್ಶಿ ನಿಯಮಗಳ ಕುರಿತು ಪ್ರಸ್ತಾವನೆ ಸಲ್ಲಿಸಿದೆ. ಅಲ್ಲದೇ ಗ್ರಾಹಕರಿಗೆ ಸುರಕ್ಷಿತ ಅನುಭವ ಹಾಗೂ ಡೆವಲಪರ್ ಮತ್ತು ಗ್ರಾಹಕರಿಗೆಲ್ಲರಿಗೂ ಒಳಿತಾಗುವ ಜಾಗತಿಕ ನೀತಿಯನ್ನು ನಾವು ಅನುಸರಿಸುತ್ತೇವೆ ಎಂದು ಗೂಗಲ್ ಹೇಳಿದೆ.

ಗ್ರಾಹಕರಿಗೆ ಸುರಕ್ಷಿತೆಯ ದೃಷ್ಟಿಯಿಂದ ಗೂಗಲ್ ಪ್ಲೇಯನ್ನು ರೂಪಿಸಲಾಗಿದೆ. ಇದೇ ವೇಳೆ ಡೆವಲಪರ್ ಗಳಿಗೆ ಸ್ಥಿರ ವ್ಯವಹಾರವನ್ನು ನಿರ್ಮಿಸಲು ಅಗತ್ಯವಾದ ವೇದಿಕೆಯನ್ನು ನೀಡುತ್ತಿದ್ದೇವೆ. ನಮ್ಮ ಜಾಗತಿಕ ಗೂಗಲ್ ನಿಯಮಗಳು ಯಾವಾಗಲೂ ಈ ಅಂಶಗಳೊಂದಿಗೆ ನಿರೂಪಿಸಲಾಗುತ್ತದೆ. ನಮ್ಮ ಎಲ್ಲಾ ಷೇರುದಾರರ ಒಳ್ಳೆಯದನ್ನು ನಾವು ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಗೂಗಲ್ ಹೇಳಿದೆ.

ನಮ್ಮ ಜೂಜು ನೀತಿಗೂ ಒಂದೇ ಗುರಿಯನ್ನು ಹೊಂದಿದ್ದು, ನಾವು ಆನ್‍ಲೈನ್ ಕ್ಯಾಸಿನೊಗಳನ್ನು ಅನುಮತಿಸುವುದಿಲ್ಲ. ಕ್ರೀಡಾ ಬೆಟ್ಟಿಂಗ್‍ಗಳಿಗೆ ಅನುಕೂಲವಾಗುವ ಯಾವುದೇ ಅಪ್ಲಿಕೇಶನ್‍ಗಳನ್ನು ಬೆಂಬಲಿಸುವುದಿಲ್ಲ. ಯಾವುದೇ ಅಪ್ಲಿಕೇಶನ್ ಗ್ರಾಹಕರನ್ನು ಹಣ ಪಾವತಿಸುವ ಟೂರ್ನಿಗಳಿಗೆ ಕರೆದೊಯ್ಯುತ್ತಿದ್ದರೆ ಇದು ನಮ್ಮ ನಿಯಮಗಳ ಉಲ್ಲಂಘಟನೆಯಾಗಿದೆ ಎಂದು ಗೂಗಲ್ ಸ್ಪಷ್ಟಪಡಿಸಿದೆ.

ಪೇಟಿಎಂ ಸ್ಪಷ್ಟನೆ: ಪೇಟಿಎಂ ಆಂಡ್ರಾಯ್ಡ್ ಆ್ಯಪ್ ತಾತ್ಕಾಲಿಕವಾಗಿ ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಿಲ್ಲ. ಹೊಸದಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಹಾಗೂ ಅಪ್‍ಡೇಟ್ ಮಾಡಲು ಇದರಿಂದ ಸಾಧ್ಯವಿಲ್ಲ. ಶೀಘ್ರವೇ ಮತ್ತೆ ಆ್ಯಪ್ ಲಭ್ಯವಾಗಲಿದೆ. ನಿಮ್ಮ ಹಣ ಸುರಕ್ಷಿತವಾಗಿದ್ದು, ಎಂದಿನಂತೆ ವ್ಯವಹಾರವನ್ನು ನಡೆಸಬಹುದು ಎಂದು ಹೇಳಿದೆ.

Comments

Leave a Reply

Your email address will not be published. Required fields are marked *