ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ, ಸ್ಟಾರ್ ಹೋಟೆಲ್‍ಗಳಲ್ಲಿ ಬೆಡ್ ವ್ಯವಸ್ಥೆ: ಸುಧಾಕರ್

– ಚಿಕಿತ್ಸೆ, ಆಂಬುಲೆನ್ಸ್ ಉಚಿತ, ಔಷಧಿ ಕೊರತೆಯಾಗದಂತೆ ತುರ್ತು ಖರೀದಿ
– ಇಂದಿನಿಂದ ಮತ್ತೆ ಟಫ್ ರೂಲ್ಸ್, ವಿವಾಹಕ್ಕೆ ಸೇರುವ ಜನರ ಸಂಖ್ಯೆ ಮತ್ತಷ್ಟು ಇಳಿಕೆ
– ಹೊರಾಂಗಣ ಸಮಾರಂಭ 200, ಒಳಾಂಗಣದಲ್ಲಿ 100 ಜನರಿಗೆ ಮಾತ್ರ ಅವಕಾಶ

ಬೆಂಗಳೂರು: ಕೊರೊನಾ ಪ್ರಕರಣಗಳು ಹೈ ಸ್ಪೀಡ್‍ನಲ್ಲಿ ಹೆಚ್ಚಳವಾಗುತ್ತಿದ್ದರೂ ಸರ್ಕಾರ ಮಾತ್ರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಮೀನಮೇಷ ಎಣಿಸುತ್ತಿದೆ. ಕೇವಲ ಸಭೆ ಸಮಾರಂಭಗಳಿಗೆ ಮಾತ್ರ ಕಡಿವಾಣ ಹಾಕಿ ಕೈ ತೊಳೆದುಕೊಳ್ಳಲಾಗಿದೆ.

ಕೊರೊನಾ ನಿಯಂತ್ರಣದ ಬಗ್ಗೆ ಸಿಎಂ ಜೊತೆಗೆ ಸಭೆ ನಡೆಸಿದ ಬಳಿಕ ಆರೋಗ್ಯ ಸಚಿವ ಸುಧಾಕರ್ ಸುದ್ದಿಗಾರರೊಂದಿಗೆ ಮಾತನಾಡಿ, ವೈದ್ಯರ ಕೊರತೆ ಆಗದಂತೆ 6 ತಿಂಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ವಾರ್ಡ್ ಗೆ ಇನ್ನೊಂದು ಆಂಬುಲೆನ್ಸ್ ಹೆಚ್ಚಳ, ಚಿಕಿತ್ಸೆ ಉಚಿತ, ಆಂಬುಲೆನ್ಸ್ ಉಚಿತ, ಔಷಧಿ ಕೊರತೆಯಾಗದಂತೆ ತುರ್ತು ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಆಕ್ಸಿಜನ್ ಲಭ್ಯತೆ ಹೆಚ್ಚಳ ಮಾಡುತ್ತೇವೆ, ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಯೂನಿಟ್ ಸ್ಥಾಪನೆ, ಕೇಂದ್ರಕ್ಕೂ ಕೋರಿಕೆ ಸಲ್ಲಿಸಲಿದ್ದೇವೆ, ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳ ಬೆಡ್ ಮೇಲುಸ್ತುವಾರಿಗೆ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಒಟ್ಟು 5 ಸಾವಿರ ಬೆಡ್ ಗಳ ನ್ನು ಸಿದ್ಧ ಮಾಡುತ್ತೇವೆ. ಓರ್ವ ಐಎಎಸ್, ಓರ್ವ ಐಪಿಎಸ್, ಓರ್ವ ನೋಡಲ್ ಅಧಿಕಾರಿ ಮತ್ತು ಇನ್ನೊಬ್ಬರು ಒಟ್ಟು 4 ಜನ ಇರುತ್ತಾರೆ. ಹಾಸಿಗೆ ಹೆಚ್ಚಳಕ್ಕೆ ಸಹ ಕ್ರಮ ವಹಿಸಲಾಗಿದೆ. ಖಾಸಗಿ ಸ್ಟಾರ್ ಹೋಟೆಲ್ ಜೊತೆಗೆ ಒಡಂಬಡಿಕೆ ಮಾಡಿಕೊಂಡು ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ತುರ್ತು ಅಗತ್ಯ ಇದ್ದವರಿಗೆ ಬಳಕೆಗೆ ನೀಡಲಾಗುವುದು ಎಂದು ತಿಳಿಸಿದರು.

ಅನಗತ್ಯ ಗುಂಪು ಸೇರಲು ನಿಷೇಧವಿದೆ, ವಿವಾಹ ಸಮಾರಂಭಗಳಿಗೆ ನಿಯಮಿತ ಅವಕಾಶ ನೀಡಲಾಗಿದೆ. ಒಳಾಂಗಣ 100, ಹೊರಾಂಗಣ 200 ಮಂದಿ ಮಾತ್ರ ಅವಕಾಶ ನೀಡಲಾಗಿದೆ. ಜನಸಂದಣಿ ಇಳಿಕೆಗೆ ಆದೇಶ ನೀಡಲಾಗಿದೆ. ಈ ಹಿಂದೆ ವಿವಾಹ ಸಮಾರಂಭಗಳಲ್ಲಿ ಒಳಾಂಗಣದಲ್ಲಿ 200 ಮತ್ತು ಹೊರಾಂಗಣದಲ್ಲಿ 500 ಜನ ಭಾಗವಹಿಸಬಹುದಿತ್ತು. ಈ ಪ್ರಮಾಣವನ್ನು ಇದೀಗ ಕಡಿತಗೊಳಿಸಲಾಗಿದೆ ಎಂದು ತಿಳಿಸಿದರು.

ಏಪ್ರಿಲ್ 18 ರಂದು ಮತ್ತೆ ಸಭೆ ಕರೆಯಲಾಗಿದೆ, ಸಭೆಯ ಸಲಹೆ, ಸೂಚನೆ ಪಡೆದು ಸೂಕ್ತ ಘೋಷಣೆಯನ್ನು ಸಿಎಂ ಮಾಡುತ್ತಾರೆ. ಅಂದು ಸಚಿವರ ಸಭೆ ಕೂಡ ಕರೆಯಲಾಗಿದೆ, ಸಚಿವರ ಅಭಿಪ್ರಾಯ ಪಡೆದು, ವಿಶೇಷವಾಗಿ ಬೆಂಗಳೂರಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನತೆಯ ಸಹಕಾರ ಅಗತ್ಯವಾಗಿದ್ದು, ಪ್ಯಾನಿಕ್ ಆಗೋದು ಬೇಡ, ಎಲ್ಲ ಸೌಲಭ್ಯವನ್ನು ಸರ್ಕಾರ ಮಾಡುತ್ತದೆ. ಹೆಚ್ಚು ಲಕ್ಷಣಗಳಿರುವವರು ಮಾತ್ರ ಆಸ್ಪತ್ರೆ ಬಳಸುವಂತೆ ಆದೇಶಿಸುತ್ತೇವೆ ಎಂದರು.

Comments

Leave a Reply

Your email address will not be published. Required fields are marked *